– ತನಿಖೆ ಪ್ರಗತಿ ಬಗ್ಗೆ ಲೋಕಾಯುಕ್ತಕ್ಕೆ ಇಡಿ ಪತ್ರ
– ಮಾಲೀಕ ದೇವರಾಜು ನಡೆಯೇ ಅನುಮಾನಾಸ್ಪದ
– ಮಲ್ಲಿಕಾರ್ಜುನ ಸ್ವಾಮಿ ಹೇಳಿಕೆ ಸುಳ್ಳು
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸೈಟ್ ಹಂಚಿಕೆ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ (ED) ಭೂ ಸ್ವಾಧೀನ ಪ್ರಕ್ರಿಯೆಯೇ ಅಕ್ರಮ ಎಂದು ಹೇಳಿದೆ.
ಮುಡಾ ಅಕ್ರಮದ ತನಿಖೆ ನಡೆಸುತ್ತಿರುವ ಇಡಿ ಲೋಕಾಯುಕ್ತ ಎಡಿಜಿಪಿಗೆ (Lokayukta ADGP) ತನಿಖೆಯ ಪ್ರಗತಿಯ ಬಗ್ಗೆ ಪತ್ರ ಬರೆದು ಬ್ರಹ್ಮಾಂಡ ಭ್ರಷ್ಟಾಚಾರವನ್ನು (Corruption) ಎಳೆಎಳೆಯಾಗಿ ಬಿಡಿಸಿದೆ. ಸಿಎಂ ಪತ್ನಿಗೆ ಕೊಟ್ಟಿರುವ 14 ಸೈಟ್‌ಗಳು ಸಹ ಅಕ್ರಮ ಎಂದು ಇಡಿ ಉಲ್ಲೇಖಿಸಿದೆ.
Advertisement
ಜಮೀನಿನ ಮಾಲೀಕ ಜೆ.ದೇವರಾಜು ನಡೆಯೇ ಅನುಮಾನಾಸ್ಪದವಾಗಿದೆ. ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ವರ್ಕ್ ಆರ್ಡರ್ ಆದ ಜಾಗದಲ್ಲಿ ಬಡಾವಣೆ ನಿರ್ಮಿಸಿ ಫಲಾನುಭವಿಗಳಿಗೆ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿತ್ತು. ದೇವನೂರು ಬಡಾವಣೆಯಲ್ಲೇ 352 ಸೈಟ್‌ಗಳು ಖಾಲಿ ಇದ್ದರೂ ಅಲ್ಲಿ 60:40 ಅನುಪಾತದಲ್ಲಿ ಸೈಟ್ ಮಂಜೂರು ಮಾಡದೇ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 14 ಸೈಟ್‌ಗಳನ್ನು ಹಂಚಿಕೆ ಮಾಡಿದ್ದನ್ನು ನೋಡಿದಾಗ ಭಾರೀ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ದೃಢವಾಗುತ್ತದೆ ಎಂದು ಇಡಿ ಹೇಳಿದೆ.
Advertisement
ಇಡಿ ತನ್ನ ತನಿಖಾ ವರದಿಯ ಸಾರಾಂಶ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು ಅದನ್ನು ಇಲ್ಲಿ ನೀಡಲಾಗಿದೆ.
Advertisement
Advertisement
ಇಡಿ ಪತ್ರದಲ್ಲಿ ಏನಿದೆ?
ತನಿಖೆ ಅಂಶ -1
ಜೆ.ದೇವರಾಜು ನಡೆಯೇ ಅನುಮಾನಾಸ್ಪದ
ಕೆಸರೆ ಗ್ರಾಮದ ವಿವಾದಿತ ಜಮೀನು ಭೂಸ್ವಾಧೀನದಿಂದ ಕೈಬಿಡುವ ಪ್ರಕ್ರಿಯೆಯೇ ಅಕ್ರಮವಾಗಿದೆ. ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಜಮೀನಿನ ಮೂಲ ಮಾಲೀಕ ಜೆ.ದೇವರಾಜು ನಡೆಯೇ ಅನುಮಾನಾಸ್ಪದವಾಗಿದೆ.
3 ಎಕರೆ 16 ಗುಂಟೆ ಜಮೀನು ಭೂಸ್ವಾಧೀನದಿಂದ ಕೈ ಬಿಡುವಂತೆ ಮುಡಾಗೆ ಅವರು ಪತ್ರ ಬರೆದಿಲ್ಲ. ಬದಲಾಗಿ 1997ರ ನಗರಾಭಿವೃದ್ಧಿ ಸಚಿವರಾಗಿದ್ದ ಬಚ್ಚೇಗೌಡರಿಗೆ ನೇರ ಮನವಿ ಸಲ್ಲಿಸಿದ್ದರು. ಜುಲೈ 24, 1997 ರಂದು ಮುಡಾ ಸಾಮಾನ್ಯ ಸಭೆಯಲ್ಲಿ ಡಿನೋಟಿಫಿಕೇಷನ್ ಬಗ್ಗೆ ಚರ್ಚೆ ನಡೆದಿದೆ. ದೇವರಾಜು ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಡಬಹುದು ಎಂಬ ನಿರ್ಧಾರಕ್ಕೆ ಬರಲಾಯಿತು.
ದೇವರಾಜು ಜಮೀನು ಬಡಾವಣೆ ಮುಖ್ಯದ್ವಾರದಿಂದ ಕೇವಲ 200 ಮೀಟರ್ ದೂರದಲ್ಲಿದೆ. ಉಪಗ್ರಹ ಆಧಾರಿತ ದೃಶ್ಯವನ್ನು ಪರಿಶೀಲಿಸಿದಾಗ ಆ ಜಮೀನು ಬಡಾವಣೆಯ ಮಧ್ಯ ಭಾಗದಲ್ಲಿರುತ್ತದೆ. ಡಿನೋಟಿಫಿಕೇಷನ್ ಪ್ರಕ್ರಿಯೆ ಆದಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಡಿನೋಟಿಫಿಕೇಷನ್ ನಿರ್ಧಾರ ಕೈಗೊಂಡ ಸಭೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಿರಲಿಲ್ಲ.
3 ಎಕರೆ ಭೂಮಿಯೇ ಜೀವನಾಧಾರ, ಬೇರೆ ಆದಾಯ ನನಗೆ ಇಲ್ಲ. ಸರ್ಕಾರಿ ನೌಕರ, ಜಮೀನಿನ ಮೇಲೆ ಅವಲಂಬಿತರಾಗಿರುವುದಿಲ್ಲ ಎಂದಿದ್ದ ದೇವರಾಜು ವಿವಾದಿತ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡಿಲ್ಲ ಎಂದು ಇಡಿಗೆ ತಿಳಿಸಿದ್ದಾರೆ. 2003ರಲ್ಲಿ ಎ3 ಆರೋಪಿ ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಜೊತೆ ಒಮ್ಮೆ ಮಾತ್ರ ಜಮೀನಿಗೆ ಭೇಟಿ ನೀಡಿದ್ದರು. 2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಿದಾಗ ಅದು ಕೃಷಿ ಭೂಮಿ ಎಂದಿದ್ದರು. ಆದರೆ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದ ಬಗ್ಗೆ ದೇವರಾಜು ಸರಿಯಾದ ವಿವರಣೆ ನೀಡಿಲ್ಲ.
ತನಿಖೆ ಅಂಶ – 2
ಮಲ್ಲಿಕಾರ್ಜುನ ಸ್ವಾಮಿ ಹೇಳಿಕೆ ಸುಳ್ಳು
ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ದೇವರಾಜುರಿಂದ 5,95,000 ರೂ.ಗಳಿಗೆ ಜಮೀನು ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. 2004ರಲ್ಲಿ ಜಮೀನು ಖರೀದಿ ಮಾಡಿದಾಗ ಅದು ಕೃಷಿ ಭೂಮಿಯೇ ಆಗಿತ್ತು. ಆದರೆ ಮುಡಾದಿಂದ ಬಡಾವಣೆ ಅಭಿವೃದ್ಧಿ ಕಾರ್ಯ ನಡೆಯುತ್ತಿರಲಿಲ್ಲ ಎಂದಿದ್ದಾರೆ. ಆದರೆ ಅದಾಗಲೇ ಬಡಾವಣೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ರಸ್ತೆಗಳು ನಿರ್ಮಾಣವಾಗಿದ್ದವು ಎಂಬ ಸಂಗತಿ ತನಿಖೆಯಿಂದ ಬಯಲಾಗಿದೆ.
2001ರಲ್ಲೇ ಎಲ್& ಟಿ ಕಂಪನಿಗೆ ಬಡಾವಣೆ ನಿರ್ಮಾಣಕ್ಕೆಂದು ವರ್ಕ್ ಆರ್ಡರ್ ಆಗಿತ್ತು. 2003ರಲ್ಲೇ ಬಡಾವಣೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಸೈಟ್ ಹಂಚಿಕೆ ಸಹ ಆಗಿತ್ತು.
ಡಿಸೆಂಬರ್ 1, 20024 ರಂದು ರಂದು ಮೈಸೂರು ತಹಶೀಲ್ದಾರ್‌ಗೆ ಕೃಷಿಯೇತರ ಭೂಮಿ ಎಂದು ಪರಿವರ್ತಿಸುವಂತೆ ಮನವಿ ಮಾಡಲಾಗುತ್ತದೆ. ತಹಶೀಲ್ದಾರ್, ಡಿಸಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಡೆದಿಲ್ಲವೆಂದು ನಮೂದು ಮಾಡುತ್ತಾರೆ. ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವದಿಂದ ಕಾನೂನು ಉಲ್ಲಂಘಿಸಿ ಭೂ ಪರಿವರ್ತನೆ ಮಾಡಲಾಗಿದೆ. ಈ ಪ್ರಕ್ರಿಯೆಗಳು ನಡೆಯುತ್ತಿದ್ದಾಗ ಧರಂ ಸಿಂಗ್ ಸರ್ಕಾರದಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು.
ತನಿಖೆಯ ಅಂಶ- 3
ಸಿದ್ದರಾಮಯ್ಯ ಪತ್ನಿಗೆ ದಾನಪತ್ರ
2010ರಲ್ಲಿ ಪಾರ್ವತಿಗೆ ದಾನದ ರೂಪದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಜಾಗವನ್ನು ನೀಡಿದ್ದರು. 6 ವರ್ಷಗಳ ಕಾಲ ಆ ಭೂಮಿ ಸ್ಥಿತಿಗತಿ ಮಲ್ಲಿಕಾರ್ಜುನ ಸ್ವಾಮಿಗೆ ಮಾಹಿತಿಯೇ ಇರಲಿಲ್ಲವೇ? ಒಂದು ವೇಳೆ ಗೊತ್ತಿದ್ದರೆ ಯಾಕೆ ಆಕ್ಷೇಪ ಸಲ್ಲಿಸಲಿಲ್ಲ? ಈ ಎಲ್ಲಾ ಪ್ರಕ್ರಿಯೆಗಳನ್ನು ಹಗರಣದ ಭಾಗವಾಗಿಯೇ ಮಾಡಿದ್ದರಿಂದ ಆಕ್ಷೇಪ ಸಲ್ಲಿಸಿಲ್ಲ ಎನ್ನುವುದು ತಿಳಿಯುತ್ತಿದೆ. ಕೆಸರೆ ಜಾಗದ ಬದಲಾಗಿ ಪ್ರಮುಖ ಸ್ಥಳದಲ್ಲಿ ಬೆಲೆಬಾಳುವ ಸೈಟ್ ಪಡೆಯುವ ದುರುದ್ದೇಶದಿಂದಲೇ ಈ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲಾಗಿದೆ ಎನ್ನುವುದು ಮೆಲ್ನೋಟಕ್ಕೆ ಗೊತ್ತಾಗುತ್ತಿದೆ.
ತನಿಖೆಯ ಅಂಶ- 4
ಸಿದ್ದರಾಮಯ್ಯ ಪತ್ನಿ ಪಾತ್ರ ಏನು?
2014ರಲ್ಲಿ ಪಾರ್ವತಿ ಅವರು ಪರಿಹಾರ ಕೋರಿ ಮುಡಾಗೆ ಅರ್ಜಿ ಸಲ್ಲಿಸುತ್ತಾರೆ. ಕೆಸರೆ ಗ್ರಾಮದ ತಮ್ಮ ಜಮೀನನ್ನು ಬಡಾವಣೆ ನಿರ್ಮಾಣಕ್ಕೆ ಮುಡಾ ಬಳಸಿಕೊಂಡಿದೆ. ಸೂಕ್ತ ಪರಿಹಾರ ಕೊಡುವಂತೆ ಕೋರುತ್ತಾರೆ. ಸಿದ್ದರಾಮಯ್ಯ ಅವರು 2013ರಲ್ಲಿ ಮುಖ್ಯಮಂತ್ರಿ ಆದ ಬಳಿಕ 2014ರಲ್ಲಿ ಪರಿಹಾರ ಕೋರಿ ಅರ್ಜಿ ಹಾಕುತ್ತಾರೆ.
ಪಾರ್ವತಿ ಅವರ ಅರ್ಜಿ ಪರಿಗಣಿಸಿದ ಮುಡಾ 60:40ರ ಅನುಪಾತದಲ್ಲಿ ಪರಿಹಾರ ಕೊಡಲು ಒಪ್ಪಿಗೆ ಸೂಚಿಸುತ್ತದೆ. ಅಂದು ನಟೇಶ್ ಮುಡಾ ಆಯುಕ್ತರಾಗಿರುತ್ತಾರೆ. ವಿನಾಕಾರಣ ವ್ಯಾಜ್ಯ ತಪ್ಪಿಸಲು ಹಾಗೂ ಮುಡಾಗೆ ಆರ್ಥಿಕ ಹೊರೆ ತಪ್ಪಿಸುವ ಉದ್ದೇಶದಿಂದ ಪಾರ್ವತಿ ಅವರಿಗೆ 60:40ರ ಅನುಪಾತದಲ್ಲಿ ಪರಿಹಾರ ಕೊಡಬಹುದು ಎಂದು ಅಂದಿನ ಮುಡಾ ಆಯುಕ್ತರಾಗಿದ್ದ ನಟೇಶ್ ಷರಾ ಬರೆಯುತ್ತಾರೆ.
ಪಾರ್ವತಿ ಅವರ ಅರ್ಜಿಗೆ ವಿಶೇಷ ಮನ್ನಣೆ ನೀಡಿರುವುದು ಇದರಿಂದ ಗೊತ್ತಾಗುತ್ತದೆ. ಖುದ್ದು ನಟೇಶ್ ಅವರೇ ವೈಯಕ್ತಿಕ ಹಿತಾಸಕ್ತಿಯಿಂದ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ ಪರಿಹಾರ ರೂಪದ ಸೈಟ್‌ಗಳನ್ನು ಗುರುತಿಸಿರುತ್ತಾರೆ.
ಪರಿಹಾರ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಅಂತ ಗುರುತಿಸಿಕೊಳ್ಳುವ ದಿನೇಶ್ ಕುಮಾರ್ ಅಲಿಯಾಸ್ ಸಿಟಿ ಕುಮಾರ್ ಹಸ್ತಕ್ಷೇಪ ಎದ್ದು ಕಾಣುತ್ತದೆ. ಖಾತೆ ಪಡೆದುಕೊಳ್ಳಲು ಸಲ್ಲಿಸುವ ಅರ್ಜಿ ಹಾಗೂ ಇತರೆ ಅರ್ಜಿಗಳಲ್ಲಿ ಪಾರ್ವತಿ ಅವರ ಸಹಿಯನ್ನು ದಿನೇಶ್ ಕುಮಾರ್ ನಕಲು ಮಾಡಿರುವುದು ಕಂಡುಬಂದಿದೆ. ದಿನೇಶ್ ಕುಮಾರ್ ಅವರ ಪ್ರಭಾವದ ಬಗ್ಗೆ ಮುಡಾ ಮಾಜಿ ಆಯುಕ್ತ ನಟೇಶ್ ಕೂಡ ಹೇಳಿದ್ದಾರೆ. ಮುಡಾ ಆಯುಕ್ತರ ಪಿಎ ಜೊತೆ ದಿನೇಶ್ ಕುಮಾರ್ ನಿರಂತರ ಸಂಪರ್ಕದಲ್ಲಿದ್ದರು. ಒಟ್ಟಾರೆ ಸೈಟ್ ಹಂಚಿಕೆಯಲ್ಲಿ ಪ್ರಭಾವ ನಡೆದಿರುವುದು ಕಂಡುಬಂದಿದೆ.
ತನಿಖೆಯ ಅಂಶ- 5
ಪರಿಹಾರ ಸೈಟ್ ಹಂಚಿಕೆಯಲ್ಲೂ ಅಕ್ರಮ
ಮೂರು ಎಕರೆ ಜಮೀನು ಇದ್ದ ದೇವನೂರು ಬಡಾವಣೆಯಲ್ಲೇ 352 ಸೈಟ್‌ಗಳು ಖಾಲಿ ಇದ್ದರೂ ಅಲ್ಲೇಕೆ 60:40 ಅನುಪಾತದಲ್ಲಿ ಸೈಟ್ ಕೊಡಲಿಲ್ಲ ಎಂಬ ಗಂಭೀರ ಪ್ರಶ್ನೆ ಕಾಣುತ್ತದೆ. ಕಾಯ್ದೆ ಕಾನೂನಿನ ಪ್ರಕಾರ ಪರಿಹಾರ ರೂಪದಲ್ಲಿ ಕಮರ್ಷಿಯಲ್ ಸೈಟ್‌ಗಳನ್ನು ಕೊಡುವಂತಿಲ್ಲ. ಹೀಗಿದ್ದರೂ ಪಾರ್ವತಿಯವರಿಗೆ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ ಕಾನೂನು ಬಾಹಿರವಾಗಿ ಸೈಟ್ ಹಂಚಿಕೆ ಮಾಡಲಾಗಿದೆ.
ಸೈಟ್ ಮಂಜೂರು ಮಾಡಿದಾಗ ಪಾರ್ವತಿ ಅವರ ಮಗ ಯತೀಂದ್ರ ವರುಣ ಕ್ಷೇತ್ರದ ಶಾಸಕರಾಗಿದ್ದರು ಮತ್ತು ಮುಡಾ ಮಂಡಳಿಯ ಸದಸ್ಯರಾಗಿದ್ದರು. ಪಾರ್ವತಿ ಅವರ ಪತಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಇದೇ ವೇಳೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಅಂತ ಹೇಳಿಕೊಳ್ಳುವ ದಿನೇಶ್ ಕುಮಾರ್ ಅವರು ಮುಡಾದಲ್ಲಿ ಪ್ರಭಾವ ಬಳಸಿರುವ ಸಾಧ್ಯತೆಯಿದೆ.