ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ (MUDA Scam) ಸಂಬಂಧಿಸಿದಂತೆ ಸೋಮವಾರ ಜಾರಿನಿರ್ದೇಶನಾಲಯ (ED) ದಾಳಿ ನಡೆಸಿದ ಬೆನ್ನಲ್ಲೇ ಮುಡಾದ ಮಾಜಿ ಆಯುಕ್ತ , ಐಎಎಸ್ ಅಧಿಕಾರಿ ದಿನೇಶ್‌ಕುಮಾರ್ (Dinesh Kumar) ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ದಿನೇಶ್ ಕುಮಾರ್ ನೆಲೆಸಿದ್ದ ಬಾಣಸವಾಡಿಯ ದೀಪಿಕಾ ರಾಯಲ್ ಅಪಾರ್ಟ್‌ಮೆಂಟ್ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಡಿ ಅಧಿಕಾರಿಗಳ ದಾಳಿಯ ವೇಳೆ ದಿನೇಶ್ ಕುಮಾರ್ ವಾಕಿಂಗ್ ಮಾಡುತ್ತಿದ್ದರು. ಇಡಿ ಅಧಿಕಾರಿಗಳು ಮನೆಗೆ ಬಂದ ವಿಚಾರ ತಿಳಿದು ವಾಕಿಂಗ್ ಮಾಡುತ್ತಿದ್ದ ಸ್ಥಳದಿಂದಲೇ ದಿನೇಶ್ ಕುಮಾರ್ ಪರಾರಿಯಾಗಿದ್ದಾರೆ.
ಸದ್ಯ ಮೊಬೈಲ್ ನಂಬರ್ ಸ್ವಿಚ್ ಆಫ್ ಮಾಡಿರುವ ದಿನೇಶ್ ಕುಮಾರ್‌ಗಾಗಿ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ಲ್ಯಾಂಡ್ ಜಿಹಾದ್, ಜಮೀರ್ ಒಬ್ಬ ಆಧುನಿಕ ಟಿಪ್ಪು ಸುಲ್ತಾನ್: ಆರ್.ಅಶೋಕ್
2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಯಾವುದೇ ಸ್ಥಳ ತೋರಿಸದೇ ದಿನೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಹಾವೇರಿ ವಿವಿಯ ಕುಲಸಚಿವ ಹುದ್ದೆಯನ್ನು ನೀಡಿತ್ತು. ಕುಲಸಚಿವ ಹುದ್ದೆಯನ್ನು ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಕೊನೆಗೆ ಆ ಆದೇಶವನ್ನೇ ರದ್ದು ಮಾಡಿತ್ತು.