ಬೆಂಗಳೂರು: ಕಾಂಗ್ರೆಸ್ (Congress) ಪ್ರಾಸಿಕ್ಯೂಷನ್ ವಾರ್ ಈಗ ದೆಹಲಿ ಅಂಗಳ ತಲುಪಿದ್ದು ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ವೇದಿಕೆ ಸಿದ್ಧಪಡಿಸುತ್ತಿದೆ.
ಹೌದು. ಇಂದು ಹೈಕಮಾಂಡ್ ಅಂಗಳದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಾಸಿಕ್ಯೂಷನ್ ಅಸ್ತ್ರದ ಸಮರ್ಥನೆಗೆ ಮುಂದಾಗಲಿದ್ದಾರೆ. ಎಂತಹದೇ ಪರಿಸ್ಥಿತಿ ಬಂದರೂ ಹೈಕಮಾಂಡ್ ರಾಜೀನಾಮೆಗೆ ಸೂಚಿಸಬಾರದು ಎಂಬ ರೀತಿಯಲ್ಲಿ ಮನವರಿಕೆ ಮಾಡಿಕೊಡುವ ಲೆಕ್ಕಾಚಾರವನ್ನು ಸಿಎಂ ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 12,690 ಕೋಟಿ ರೂ. ವೆಚ್ಚದ ಸುರಂಗ ರಸ್ತೆ ಯೋಜನೆಗೆ ಸಂಪುಟ ಸಭೆ ಅಸ್ತು
ಹೈಕಮಾಂಡ್ ಜೊತೆಗಿನ ಇಂದಿನ ಸಭೆ ಸಿದ್ದರಾಮಯ್ಯ ಪಾಲಿಗೆ ನಿರ್ಣಾಯಕವಾಗಿದೆ. ವಕೀಲರು ಎಐಸಿಸಿಯಿಂದಲೇ (AICC) ಬಂದಿರುವುದರಿಂದ ದಾಖಲೆ ಸಹಿತ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುವ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಹಾಕಿಕೊಂಡಿದ್ದಾರೆ.
ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ನೀಡಲು ಕಾಂಗ್ರೆಸ್ ನಾಯಕರು ಗುರುವಾರದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ. ಹೈಕಮಾಂಡ್ ಅನುಮತಿಸಿದರೆ ಸಿಎಂ, ಡಿಸಿಎಂ ಡಿಕೆ ಶಿವಕುಮಾರ್ ದಿನಾಂಕ ನಿಗದಿ ಮಾಡಿ ಎಲ್ಲ 135+1 ಶಾಸಕರನ್ನ ದೆಹಲಿಗೆ ಕರೆದೊಯ್ದು ರಾಷ್ಟ್ರಪತಿಗಳ ಮುಂದೆ ಪರೇಡ್ ಮಾಡಿಸುವ ಪ್ಲಾನ್ ಹಾಕಿಕೊಳ್ಳಲಾಗಿದೆ.
ಶಾಸಕರ ಪರೇಡ್ ಮೂಲಕ ರಾಷ್ಟ್ರಪತಿಗಳ ಮುಂದೆ ಶಕ್ತಿ ಪ್ರದರ್ಶನ ಮಾಡಿ ನಮ್ಮದು ಬಹುಮತದ ಸರ್ಕಾರ ಎಂಬ ಸಂದೇಶ ರವಾನೆಗೆ ಕಸರತ್ತು ಮಾಡಲು ಸಿಎಂ ಮುಂದಾಗಿದ್ದಾರೆ.