– ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿಗೆ ಅಧಿಕಾರವಿಲ್ಲ: ಸಿಬಲ್ ವಾದ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ (High Court) ಜ.25ಕ್ಕೆ ಮುಂದೂಡಿಕೆ ಮಾಡಿದೆ.
Advertisement
ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜರಿಯಾ ನೇತೃತ್ವದ ವಿಭಾಗೀಯ ಪೀಠದಲ್ಲಿ ಸಿದ್ದರಾಮಯ್ಯ ಸಲ್ಲಿಕೆ ಮಾಡಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಯಿತು. ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದನ್ನು ಏಕಸದಸ್ಯ ಪೀಠದಲ್ಲಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು. ಏಕಸದಸ್ಯ ಪೀಠ ನೀಡಿರುವ ತೀರ್ಪನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ.
Advertisement
ಮತ್ತೊಂದು ಕಡೆ ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ದೇವರಾಜು ಎಂಬುವವರು ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅಲ್ಲದೇ ಲೋಕಾಯುಕ್ತ ತನಿಖೆಗೆ ಆದೇಶ ನೀಡಿದ ಆದೇಶವನ್ನು ವಿಭಾಗೀಯ ಪೀಠದಲ್ಲಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
Advertisement
ಸರ್ಕಾರದ ಪರವಾಗಿ ಕಪಿಲ್ ಸಿಬಲ್ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ಹಾಜರಾಗಿದ್ದರು. ಸಿಎಂ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಹಾಗೂ ರಾಜ್ಯಪಾಲರ ಪರ ಸಾಲಿಸಿಟರಿ ಜನರಲ್ ತುಷಾರ್ ಮೆಹ್ತಾ ಹಾಜರಿದ್ದರು. ಇನ್ನೂ ದೇವರಾಜು ಪರ ಹಿರಿಯ ವಕೀಲ ದುಷ್ಯಂತ್ ದವೆ ವಾದ ಮಂಡಿಸಿದ್ದು, ದೇವರಾಜು ವಿರುದ್ಧ ಯಾವುದೇ ಆರೋಪ ಇಲ್ಲ. ಆದರೂ 4ನೇ ಆರೋಪಿಯನ್ನಾಗಿ ಮಾಡಲಾಗಿದೆ. ಅವರಿಗೆ ಕಾನೂನಿನ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
Advertisement
ಅರ್ಜಿ ವಿಚಾರಣೆಯನ್ನು 10ನೇ ತಾರೀಖಿನ ಒಳಗೆ ಇತ್ಯರ್ಥ ಮಾಡಿ. ಏಕಸದಸ್ಯ ಪೀಠದಲ್ಲಿ ಪ್ರಕರಣ ಸಿಬಿಐಗೆ ವರ್ಗಾವಣೆ ಮಾಡುವ ಅರ್ಜಿ ವಿಚಾರಣೆ ನಡೆಯುತ್ತಾ ಇದೆ. 2004 ರಲ್ಲಿ ದೇವರಾಜು ಜಮೀನು ಮಾರಾಟ ಮಾಡಿದ್ದಾರೆ. ಆತನನ್ನೇ ಮೋಸ ಮಾಡಿದ್ದಾರೆ ಎಂದು ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. 80ನೇ ವಯಸ್ಸಿನಲ್ಲಿ ದೇವರಾಜು ಈ ರಾಜಕೀಯ ದಾಳಿಯಲ್ಲಿ ಸಿಲುಕಿದ್ದಾರೆ. ಏಕಸದಸ್ಯ ಪೀಠದಲ್ಲಿ ನನ್ನ ವಾದವನ್ನು ಆಲಿಸದೇ ಆದೇಶ ನೀಡಲಾಗಿದೆ ಎಂದು ಅವರು ನ್ಯಾಯ ಪೀಠದ ಗಮನಕ್ಕೆ ತಂದಿದ್ದಾರೆ.
ಈ ವೇಳೆ ನ್ಯಾಯಾಲಯ, ನಾವು ಏಕಸದಸ್ಯ ಪೀಠ ಅಥವಾ ಬೇರೊಂದು ಪೀಠದಲ್ಲಿನ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು. ಅದಕ್ಕೆ ಪ್ರತಿಯಾಗಿ ನಮಗೆ ರಕ್ಷಣೆ ಒದಗಿಸಬೇಕು. ನಾವು ಮಧ್ಯಪ್ರವೇಶ ಮಾಡಬೇಕು ಎಂದು ಕೇಳುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಏಕಸದಸ್ಯ ಪೀಠದ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿಸಬೇಕೆ ಅಥವಾ ಬೇಡವೇ ಎಂಬ ವಿಚಾರ ಮಾತ್ರ ಇತ್ತು. ಆದರೆ, ನಮ್ಮ ಬಗ್ಗೆ ಏಕಸದಸ್ಯ ಪೀಠ ಅಭಿಪ್ರಾಯ ನೀಡಿ, ತನಿಖೆಗೆ ಆದೇಶಿಸಿದೆ. ನಮ್ಮ ವಾದವನ್ನು ಆಲಿಸಲಾಗಿಲ್ಲ. ಭೂಮಿಯನ್ನ ಮುಡಾ ವಶಕ್ಕೆ ಪಡೆಯುವಾಗ ದೇವರಾಜ್ ಹೆಸರಲ್ಲಿಯೇ ಇತ್ತು. ಹೀಗಾಗಿ ಡಿನೋಟಿಫೀಕೇಷನ್‍ಗೆ ಅರ್ಜಿ ಹಾಕಲಾಗಿತ್ತು. ಇನ್ನೂ ಡಿನೋಟಿಫಿಕೇಷನ್ ಅನ್ನೋದು ಅಪರಾಧ ಅಲ್ಲ ಎಂದು ಅವರು ವಾದಿಸಿದ್ದಾರೆ.
ಇದಕ್ಕೆ ನ್ಯಾಯಪೀಠ ನಿಮ್ಮ ಅರ್ಜಿಯನ್ನ ಮೆರಿಟ್ ಮೇಲೆ ವಾದ ಆಲಿಸಿ ಆದೇಶ ಮಾಡಲಾಗುವುದು. ಯಾವುದೇ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಏಕಸದಸ್ಯ ಪೀಠ ಆದೇಶದ ಮಧ್ಯೆ ಬರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಇದಕ್ಕೆ ದುಷ್ಯಂತ್ ದವೆ ಅವರು, ಸಿಬಿಐ ತನಿಖೆಗೆ ಕೋರಿರುವ ಅರ್ಜಿಯಲ್ಲಿ ನಮಗೆ ರಕ್ಷಣೆ ಬೇಕಿದೆ. ನೀವು ನಮಗೆ ರಕ್ಷಣೆ ಕೊಡಲು ಬಯಸದಿದ್ದರೆ ಅದನ್ನು ಆದೇಶದಲ್ಲಿ ದಾಖಲಿಸಿ. ನಾವು ಸುಪ್ರೀಂ ಕೋರ್ಟ್‍ನಲ್ಲಿ ರಕ್ಷಣೆ ಕೋರುತ್ತೇವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಮನುಸಿಂಘ್ವಿ ಸಿಎಂ ಪರ ವಾದ ಮಂಡನೆ ಮಾಡಿದ್ದು, ಏಕಸದಸ್ಯ ಪೀಠದ ಆದೇಶದ ತಪ್ಪುಗಳನ್ನು ವಾದಿಸಬೇಕಿದೆ. 17 ಎ ಅನುಮತಿಯನ್ನು ನೀಡಿರುವುದು ತಪ್ಪಾಗಿದೆ. 17ಎ ಉಲ್ಲಂಘನೆ ಆಗಿರೋದು ಸ್ಪಷ್ಟವಾಗಿ ಕಾಣುತ್ತಾ ಇದೆ. ಇದನ್ನು ಏಕಸದಸ್ಯ ಪೀಠ ಎತ್ತಿ ಹಿಡಿದಿದೆ. ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ರಾಜ್ಯಪಾಲರು ಸಂಪುಟ ಸಲಹೆಯ ಅನುಸಾರ ನಡೆಯಬೇಕು. ಸಂಪುಟ ಸಲಹೆಯನ್ನು ರಾಜ್ಯಪಾಲರು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ವಾದಿಸಿದರು. ಇದಕ್ಕೆ ನ್ಯಾಯಾಲಯ ತುಂಬಾ ದೊಡ್ಡದಾಗಿ ವಾದ ಮಾಡ್ತಾ ಇದ್ದೀರಿ ಈಗ ಅವಕಾಶ ಇಲ್ಲ ಎಂದು ತಿಳಿಸಿತು.
ಬಳಿಕ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸಾಮಾನ್ಯವಾಗಿ ಪ್ರಾಥಮಿಕ ತನಿಖೆ ಮುಗಿದ ಬಳಿಕ ಅನುಮತಿ ನೀಡಬೇಕಿತ್ತು. ಯಾವುದೇ ಪ್ರಾಥಮಿಕ ತನಿಖೆಯನ್ನು ಮಾಡದೇ ಅನುಮತಿ ನೀಡಲಾಗಿದೆ. ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಅಧಿಕಾರವೇ ಇಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರು ಅಧಿಕಾರ ವ್ಯಾಪ್ತಿ ಹೊಂದಿಲ್ಲ. ಸಾಂವಿಧಾನಿಕ ಪೀಠದ ತೀರ್ಪಿನ ಪ್ರಕಾರ ಮುಖ್ಯಮಂತ್ರಿಯನ್ನು ತೆಗೆಯುವ ಅಧಿಕಾರ ಇರುವುದು ಸ್ಪೀಕರ್‌ಗೆ. ರಾಜ್ಯಪಾಲರಿಗೆ ತನಿಖೆ ನಡೆಸಲು ಯಾವ ಅಧಿಕಾರವಿದೆ? ರಾಜ್ಯಪಾಲರು ರಾಷ್ಟ್ರಪತಿಗೆ ಪ್ರಕರಣ ವರ್ಗಾಯಿಸಬಹುದಿತ್ತು ಎಂದು ವಾದಿಸಿದರು.
ವಾದವನ್ನು ಆಲಿಸಿದ ಹೈಕೋರ್ಟ್, ಪ್ರತಿವಾದಿಗಳಿಗೆ ನೋಟಿಸ್ ನೀಡಿ ಜ.25ಕ್ಕೆ ವಿಚಾರಣೆ ಮುಂದೂಡಿದೆ.