– ಲೋಕಾಯುಕ್ತ ವರದಿಯಲ್ಲಿ ಕರ್ತವ್ಯ ಲೋಪದ ಬಗ್ಗೆ ಉಲ್ಲೇಖ
ಬೆಂಗಳೂರು/ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ಪತ್ನಿ ಪಾರ್ವತಿ ಅವರಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ, ಅಂದಿನ ಮೈಸೂರು ಜಿಲ್ಲಾಧಿಕಾರಿ, ಈಗಿನ ರಾಯಚೂರು ಕ್ಷೇತ್ರದ ಕಾಂಗ್ರೆಸ್ ಸಂಸದ ಜಿ.ಕುಮಾರ ನಾಯಕ (G.Kumar Naik) ಅವರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲಿ ಬಹಿರಂಗಗೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ, ಕುಮಾರ ನಾಯಕ್ ಅವರೇ ಲೋಪ ಎಸಗಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದೂ ಹೇಳಿದೆ. ಎ1 ಆರೋಪಿಯಾಗಿದ್ದ ಸಿದ್ದರಾಮಯ್ಯ, ಎ2 ಪಾರ್ವತಿ, ಎ3 ಮಲ್ಲಿಕಾರ್ಜುನಸ್ವಾಮಿ, ಜಮೀನಿನ ಮಾಲೀಕ ಎ4 ದೇವರಾಜು ವಿರುದ್ಧದ ಯಾವ ಆರೋಪಗಳೂ ಸಾಬೀತಾಗಿಲ್ಲ. ಅಧಿಕಾರಿಗಳಿಂದಲೇ ಎಲ್ಲ ತಪ್ಪುಗಳಾಗಿವೆ ಎಂದು ಲೋಕಾಯುಕ್ತ ಆರೋಪಿಸಿದೆ.
ಕೆಸರೆ ಗ್ರಾಮ ವಿವಾದಿತ ಸರ್ವೆ ಸಂಖ್ಯೆ: 464ರ 3 ಎಕರೆ 16 ಗುಂಟೆ ಜಮೀನಿನ ಭೂಬಳಕೆ ಪರಿವರ್ತನೆಗೆ 2004-05ರಲ್ಲಿ ಮಲ್ಲಿಕಾರ್ಜುನಸ್ವಾಮಿ ಅರ್ಜಿ ಸಲ್ಲಿಸಿದಾಗ, ಕುಮಾರ ನಾಯಕ ಅವರು ಮೈಸೂರು ಜಿಲ್ಲಾಧಿಕಾರಿ ಆಗಿದ್ದರು. ಆ ಅವಧಿಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆಯೇ ವರದಿ ಸಲ್ಲಿಸಿದ್ದಾರೆ. ಕುಮಾರ್ ನಾಯಕ್ ಅವರು, ಜಮೀನಿನ ಸ್ಥಳ ಪರಿಶೀಲನೆ ನಡೆಸಬೇಕಿತ್ತು. ಬದಲಿಗೆ ಅಧಿಕಾರಿಗಳು ಕೆಸರೆ ಗ್ರಾಮದ ನಕ್ಷೆ, ಭೂಸ್ವಾಧೀನ ಸಂಬಂಧಿ ನಕ್ಷೆ, ಬಡಾವಣೆ ಅಭಿವೃದ್ಧಿ ನಕ್ಷೆಗಳನ್ನು ಬಳಸಿಕೊಂಡು ಸ್ಥಳ ಪರಿಶೀಲನೆ ವರದಿ ಸಿದ್ಧಪಡಿಸಿದ್ದಾರೆ. ಈ ನಕ್ಷೆಗಳಲ್ಲಿ ಸರ್ವೆ ಸಂಖ್ಯೆ 464ರ ಜಮೀನು ಖಾಲಿ ಎಂದೇ ನಮೂದಾಗಿದೆ. ಹೀಗಾಗಿ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ವರದಿ ನೀಡಿದ್ದಾರೆ ಎಂದು ಉಲ್ಲೇಖಿಸಿದೆ.
ಅಧೀನ ಅಧಿಕಾರಿಗಳು ನೀಡಿದ ಸ್ಥಳ ಪರಿಶೀಲನಾ ವರದಿಯನ್ನು ಕುಮಾರ ನಾಯಕ ಅನುಮೋದಿಸಿದ್ದಾರೆ. ವರದಿ ಖಾತರಿಪಡಿಸಿಕೊಳ್ಳದೇ ಭೂಪರಿವರ್ತನೆಗೆ ಆದೇಶಿಸಿದ್ದಾರೆ. ಇದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪಕ್ಕೆ ಹಿಡಿದ ಕೈಗನ್ನಡಿ. ಆದರೆ, ಅವರು ಭೂಮಾಲೀಕರ ಜತೆ ಸೇರಿಕೊಂಡು ಅಕ್ರಮ ಎಸಗಿದ್ದಾರೆ ಎಂದೂ, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಲೋಕಾಯುಕ್ತ ಶಿಫಾರಸು ಮಾಡಿದೆ.
ಅಧಿಕಾರಿಗಳು
1. ಜಿ.ಕುಮಾರ ನಾಯಕ್, ಹಿಂದಿನ ಮೈಸೂರು ಜಿಲ್ಲಾಧಿಕಾರಿ (ನಿವೃತ್ತ)
2. ಮಾಳಿಗೆಶಂಕರ್, ಮೈಸೂರು ತಾಲ್ಲೂಕು ಹಿಂದಿನ ತಹಶೀಲ್ದಾರ್ (ನಿವೃತ್ತ)
3. ಸಿದ್ದಪ್ಪಾಜಿ, ಮೈಸೂರು ತಾಲ್ಲೂಕು ಕಚೇರಿ ಹಿಂದಿನ ರೆವಿನ್ಯೂ ಇನ್‌ಸ್ಪೆರ್ಕ್ಟ (ನಿವೃತ್ತ)
4. ಶಂಕರಪ್ಪ ಭೂಮಾಪಕ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೈಸೂರು ತಾಲ್ಲೂಕು
ಸಿಎಂ ಪತ್ನಿ ಪಾರ್ವತಿ ಅವರ ಸೈಟ್ ಸೇರಿ 1055 ನಿವೇಶನಗಳ ಮರುಹಂಚಿಕೆ ಆಗಿದೆ. ಇದರಿಂದ ಮುಡಾದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟಾಗಿದೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಲೋಕಾಯುಕ್ತ ಸಲ್ಲಿಕೆ ಮಾಡಿರುವ ಅಂತಿಮ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.