ಬೆಂಗಳೂರು: ತಮ್ಮ ವಿರುದ್ಧ ರಾಜ್ಯಪಾಲರು ತನಿಖೆಗೆ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಹೈಕೋರ್ಟ್‌ನಲ್ಲಿ ಇನ್ನೆರಡು ದಿನಗಳ ಕಾಲ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರ ಸೆಪ್ಟೆಂಬರ್ 2ಕ್ಕೆ ಹೈಕೋರ್ಟ್ (Karnataka High Court )ಮುಂದೂಡಿದೆ.
ಸೋಮವಾರ ಮಧ್ಯಾಹ್ನ 2:30ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಲಾಗಿದೆ. ಆ ಮೂಲಕ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿದೆ.
Advertisement
Advertisement
ದೂರುದಾರ ಟಿ.ಜೆ.ಅಬ್ರಹಾಂ ಪರ ಹಿರಿಯ ವಕೀಲ ರಂಗನಾಥ್ ರೆಡ್ಡಿ ವಾದ ಮುಗಿಸುತ್ತಿದ್ದಂತೆ ಮತ್ತಷ್ಟು ವಕೀಲರಿಂದ ವಾದ ಮಂಡನೆಗೆ ಮನವಿ ಮಾಡಲಾಯಿತು. ಇದಕ್ಕೆ ಇಡೀ ದಿನ ವಾದ ಮಂಡನೆಗೆ ಅವಕಾಶ ಕೊಟ್ಟಿದ್ದೀನಿ ಎಂದು ಗರಂ ಆದರು.
Advertisement
ಈ ವೇಳೆ ಮಧ್ಯಪ್ರವೇಶಿಸಿದ ಅಬ್ರಹಾಂ ಪರ ವಕೀಲರಾದ ರಂಗನಾಥ್ ರೆಡ್ಡಿ, ರಾಜ್ಯಪಾಲರ ಮುಂದೆ ಯಾವುದೇ ಜನಪ್ರತಿನಿಧಿಗಳ ಪ್ರಾಸಿಕ್ಯೂಷನ್ ಅನುಮತಿ ಬಾಕಿ ಇಲ್ಲ ಎಂದು ಹೇಳಿದರು. ಅದಕ್ಕೆ ನಿಮಗೆ ಹೇಗೆ ಗೊತ್ತಾಯ್ತು? ಅಂತ ಜಡ್ಜ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ರಂಗನಾಥ್ ರೆಡ್ಡಿ ಅವರು ಆರ್‌ಟಿಐ ಮೂಲಕ ಮಾಹಿತಿ ಪಡೆದುಕೊಳ್ಳಲಾಗಿದೆ. ಎಲ್ಲಾ ಅರ್ಜಿಗಳನ್ನ ವಿಲೇವಾರಿ ಮಾಡಲಾಗಿದೆ. ರಾಜ್ಯಪಾಲರ ಮುಂದೆ ಸದ್ಯ ಯಾವುದೇ ಪ್ರಾಸಿಕ್ಯೂಷನ್ ಮನವಿ ಅರ್ಜಿ ಬಾಕಿ ಇಲ್ಲ ಎಂದು ವಾದ ಮಂಡಿಸಿದರು.
Advertisement
ಈ ವೇಳೆ ಎ.ಜಿ ಶಶಿಕಿರಣ್ ಶೆಟ್ಟಿ ಅವರಿಂದ ವಾದಕ್ಕೆ ಮನವಿ ಮಾಡಲಾಯಿತು. ಇದಕ್ಕೆ ಜಡ್ಜ್ ದಿನ ಬೇಕಿದ್ರೆ 3:30ಕ್ಕೆ ವಿಚಾರಣೆಗೆ ತೆಗೆದುಕೊಳ್ತೀನಿ, ಅದಕ್ಕೂ ಮೊದಲು ಸಾಧ್ಯವಿಲ್ಲ ಎಂದರು. ಈ ವೇಳೆ ಪ್ರತಿವಾದಿಗಳ ವಾದಕ್ಕೆ ಉತ್ತರ ಕೊಡಲು ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಸಮಯಾವಕಾಶ ನೀಡುವಂತೆ ಕೋರಿದರು. ನಂತರ ಕೋರ್ಟ್, ಸೋಮವಾರಕ್ಕೆ (ಸೆ.2) ವಿಚಾರಣೆ ಮುಂದೂಡಿತು.
ಪ್ರಭುಲಿಂಗ ನಾವದಗಿ ಪ್ರಬಲ ವಾದ ಮಂಡನೆ:
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಾಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದರು. ತಮ್ಮ ವಿರುದ್ಧ ತನಿಖೆಗೆ ಒಪ್ಪಿಗೆ ಸೂಚಿಸಿರುವ ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತು ವಿಚಾರಣೆ ಶನಿವಾರ ಮುಂದುವರಿಯಿತು.
ತುಷಾರ್ ಮೆಹ್ತಾ ಮತ್ತು ಸಿಂಗ್ ವಾದ ಮುಕ್ತಾಯಗೊಳಿಸುತ್ತಿದ್ದಂತೆ ಪ್ರಭುಲಿಂಗ ನಾವದಗಿ ಅವರು ದೂರುದಾರ ಪ್ರದೀಪ್ ಕುಮಾರ್ ಪರ ವಾದ ಮಂಡಿಸಿದರು. ಈ ವೇಳೆ ಜಡ್ಜ್ ತುಂಬಾ ಜನ ವಾದ ಮಂಡನೆ ಮಾಡಿದ್ದೀರಿ, ಈ ಕೇಸ್‌ನಲ್ಲಿ ಸಿಎಂ ಪಾತ್ರದ ಬಗ್ಗೆ ಹೇಳಿ – ಅವರು ಈ ಪ್ರಕರಣದಲ್ಲಿ ಹೇಗೆ ಇದ್ದಾರೆ? ಅಂತ ಪ್ರಶ್ನೆ ಮಾಡಿದರು. ಈ ವೇಳೆ ಪ್ರಕರಣದಲ್ಲಿ ಸಿಎಂ ಪಾತ್ರವಿಲ್ಲ ಎಂದು ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದರು.
ಸಿಎಂ ವಿರುದ್ದ ಆರೋಪ ಇದ್ದಾಗ ರಾಜ್ಯಪಾಲರು ಸ್ವತಂತ್ರವಾಗಿ ನಿರ್ಧರಿಸಬಹುದು:
ಆದಾಗ್ಯೂ ಪ್ರಭುಲಿಂಗ್ ವಾದ ಮುಂದುವರಿಸಿದರು. ಮುಖ್ಯಮಂತ್ರಿಗಳ ಪಾತ್ರ, ಕ್ಯಾಬಿನೆಟ್ ನಿರ್ಣಯದ ಬಗ್ಗೆ ವಾದ ಮಂಡಿಸುತ್ತೇನೆ ಎಂದರು. ಕೆಲಸ ಸಂದರ್ಭಗಳಲ್ಲಿ ಕ್ಯಾಬಿನೆಟ್ ರಾಜ್ಯಪಾಲರಿಗೆ ಸಲಹೆ ನೀಡುವ ಅರ್ಹತೆ ಕಳೆದುಕೊಳ್ಳುತ್ತದೆ ಎಂದು ಆರ್.ಎಸ್ ನಾಯಕ್ ಪ್ರಕರಣ ಉಲ್ಲೇಖಿಸಿದರು. ತಮಗಿರುವ ಆಸಕ್ತಿಯ ಕಾರಣಕ್ಕೆ ಸಂಪುಟದ ಸಚಿವರು ಪ್ರಕರಣದಲ್ಲಿ ಪಕ್ಷಪಾತಿಗಳಾಗುವ ಕಾರಣದಿಂದಾಗಿ ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರದಿಂದ ವಂಚಿತರಾಗುತ್ತಾರೆ ಎನ್ನುವ ಪೂರ್ವ ತೀರ್ಪೊಂದನ್ನು ಉಲ್ಲೇಖಿಸಿದರು. ರಾಜ್ಯಪಾಲರು ಕ್ಯಾಬಿನೆಟ್ ಸಲಹೆ ಪರಿಗಣಿಸುವ ವಿಚಾರವೇ ಇಲ್ಲ. ಸಿಎಂ ವಿರುದ್ದ ಆರೋಪ ಇದ್ದಾಗ ರಾಜ್ಯಪಾಲರು ಸ್ವತಂತ್ರವಾಗಿ ನಿರ್ಧಾರ ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ನ ಎರಡು ತೀರ್ಪು ಗಳಿವೆ ಎಂದು ಕೋರ್ಟ್ ಗಮನಕ್ಕೆ ತಂದರು.
ಸಿಎಂ ಪ್ರಾಸಿಕ್ಯೂಷನ್ ವಿಚಾರದಲ್ಲಿ ಕ್ಯಾಬಿನೆಟ್ ನಿರ್ಧಾರ ಸಮಂಜಸವಲ್ಲ. ಇದರಿಂದ ಮೇಲ್ನೋಟಕ್ಕೆ ಪಕ್ಷಪಾತದ ಭಾವನೆ ಬರಲಿದೆ ಅಂತ ಸುಪ್ರೀಂ ಕೋರ್ಟ್‌ನ ಎ.ಕೆ.ಕ್ರೈಪಾಕ್ ಕೇಸ್ ಉಲ್ಲೇಖಿಸಿ ವಾದಮಂಡನೆ ಮಾಡಿದರು. ಸಂವಿಧಾನದ ವಿಧಿ 163 ಅಡಿಯಲ್ಲಿ ಸಿಎಂ ಕೂಡಾ ಕ್ಯಾಬಿನೆಟ್‌ನ ಭಾಗ. ಹೀಗಾಗಿ ಸಿಎಂ ಹೊರತಾದ ಕ್ಯಾಬಿನೆಟ್ ಇರಲು ಸಾಧ್ಯವಿಲ್ಲ. ಆದ್ದರಿಂದ ಕ್ಯಾಬಿನೆಟ್ ನಿರ್ಣಯವನ್ನು ರಾಜ್ಯಪಾಲರು ಪರಿಗಣಿಸಬೇಕಿಲ್ಲ ಎಂದು ವಾದಿಸಿದರು.
ರಾಜ್ಯಪಾಲರ ಕ್ರಮ ಪ್ರಶ್ನಿಸಲು ಆರೋಪಿಗೆ ಅವಕಾಶವಿಲ್ಲ:
ಮುಂದುವರಿದು, 2018 ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆ.17 ಎ ಮತ್ತು 19 ತಿದ್ದುಪಡಿ ಮಾಡಲಾಗಿದೆ. ಆದರೆ ಸೆ.17 ಎ ನಲ್ಲಿ ಆರೋಪಿಗೆ ನೋಟಿಸ್ ನೀಡಲು ಅವಕಾಶವಿಲ್ಲ. ಸೆ.19 ಅಡಿಯಲ್ಲಿ ನೋಟಿಸ್ ನೀಡಲು ಅವಕಾಶವಿದೆ. ಆರೋಪಿಗೆ ನೋಟಿಸ್ ನೀಡಿ ತನಿಖೆಗೆ ಅವಕಾಶ ನೀಡಬಾರದು. ನೋಟಿಸ್ ನೀಡಿದರೆ ತನಿಖೆಯೇ ಪೂರ್ವಾಗ್ರಹಕ್ಕೊಳಗಾಗಲಿದೆ. 17 ಎ ಹಂತದಲ್ಲಿ ರಾಜ್ಯಪಾಲರ ಕ್ರಮ ಪ್ರಶ್ನಿಸಲು ಆರೋಪಿಗೆ ಅವಕಾಶವಿಲ್ಲ. ಎಫ್‌ಐಆರ್ ದಾಖಲಾದ ಬಳಿಕವಷ್ಟೇ ಆರೋಪಿಗೆ ಅದನ್ನು ಪ್ರಶ್ನಿಸುವ ಹಕ್ಕು ಬರಲಿದೆ ಎಂದು ಪ್ರಬಲ ವಾದ ಮಂಡನೆ ಮಾಡಿದರು.
ತನಿಖೆಗೆ ಕೊಟ್ಟ ಆದೇಶದಲ್ಲೇ ರಾಜ್ಯಪಾಲರು ಉಲ್ಲೇಖ ಮಾಡಿದ್ದಾರೆ. ಮೇಲ್ನೋಟಕ್ಕೆ ಇದರಲ್ಲಿ ಅಕ್ರಮ ನಡೆದಿದೆ ಅಂತ, ಆದೇಶ ಪ್ರತಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಸರ್ಕಾರಕ್ಕೆ ತನಿಖೆಯ ಅವಶ್ಯಕತೆ ಇದೆ ಅನಿಸಿದೆ. ಹೀಗಾಗಿ ನ್ಯಾಯಾಂಗ ತನಿಖಗೆ ಆದೇಶವನ್ನು ನೀಡಿದ್ದಾರೆ. ನಿವೃತ್ತ ನ್ಯಾಯಾಧೀಶ ದೇಸಾಯಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಾ ಇದೆ ಎಂದರು. ಇದೇ ವೇಳೆ ಮುಡಾ ಅಕ್ರಮ ತನಿಖೆಗಾಗಿ ನೇಮಿಸಲಾಗಿರುವ ಏಕಸದಸ್ಯ ಆಯೋಗ ಮತ್ತು ತನಿಖಾ ತಂಡದ ಕಾರ್ಯವ್ಯಾಪ್ತಿಯಲ್ಲಿ ನಿಯಮ 6,7,8ರ ಬಗ್ಗೆ ಆಕ್ಷೇಪಣೆಗಳ ಬಗ್ಗೆ ನಾವದಗಿ ನ್ಯಾಯಾಲಯದ ಗಮನಸೆಳೆದರು. ಮೇಲ್ನೋಟಕ್ಕೆ ಅಕ್ರಮವನ್ನು ಪರಿಗಣಿಸಲಾಗಿದೆ ಎನ್ನುವ ಅಂಶ ಸರ್ಕಾರದ ಆದೇಶಗಳಲ್ಲಿ ಇರುವ ಬಗ್ಗೆಯೂ ನ್ಯಾಯಾಧೀಶರ ಗಮನಕ್ಕೆ ತಂದರು.
ರಾಜ್ಯಪಾಲರು ಕಾರ್ಯವಿಧಾನ ಅನುಸರಿಸಿಲ್ಲ ಎನ್ನುವುದು ಬೇರೆ, ಅದರೆ ವಿವೇಚನೆ ಬಳಸಿಲ್ಲ ಎನ್ನಲಾಗದು. ತನಿಖೆಗೆ ನೇಮಿಸಿರುವ ಸರ್ಕಾರದ ಆದೇಶಗಳನ್ನು ರಾಜ್ಯಪಾಲರು ಗಮನಿಸಿದ್ದಾರೆ, ಹಾಗಾಗಿ ಅವರು ವಿವೇಚನೆ ಬಳಸಿಲ್ಲ ಎನ್ನಲಾಗದು ಎಂದು ವಾದಿಸಿದರು. ನಾವದಗಿ ಅವರ ಬಳಿಕ ದೂರುದಾರ ಟಿ.ಜೆ.ಅಬ್ರಹಾಂ ಪರ ಹಿರಿಯ ವಕೀಲ ರಂಗನಾಥ್ ರೆಡ್ಡಿ ವಾದ ಮಂಡಿಸಿದರು.