ಬೆಂಗಳೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (Siddaramaiah) ಅವರ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ (JDS) ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್‌ನ ಬೆಂಗಳೂರು ನಗರಾಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಸಿಎಂ ವೀಕ್ ಆಗಿಲ್ಲ, ಗುಂಡುಕಲ್ಲು ಇದ್ದ ಹಾಗೆ ಇದ್ದಾರೆ: ಪರಮೇಶ್ವರ್
ರಮೇಶ್ ಗೌಡ ಮಾತನಾಡಿ, ಸಿಎಂ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ಷಡ್ಯಂತ್ರ ಮಾಡ್ತಿದೆ ಅಂತಾ ಹೇಳ್ತಾ ಇದ್ದಾರೆ. ಪಾದಯಾತ್ರೆ ರಾಜಕೀಯ ದುರುದ್ದೇಶದಿಂದ ಮಾಡುತ್ತಿದ್ದಾರೆಂದು ಸಿಎಂ ಹೇಳಿದ್ರು. ನ್ಯಾಯಾಲಯ ಅವರ ವಿರುದ್ದ ತೀರ್ಪು ನೀಡಿದೆ. ಬಿಜೆಪಿ ಜೆಡಿಎಸ್‌ಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಹೇಳ್ತಾ ಇದ್ರಿ. ನಿಮಗೆ ನೈತಿಕತೆ ಇದ್ರೆ ರಾಜೀನಾಮೆ ಕೊಡಿ ಎಂದು ಸವಾಲು ಹಾಕಿದರು.
ರಾಜಭವನ ದುರುಪಯೋಗ ಮಾಡಿಕೊಳ್ತಾ ಇದ್ದಾರೆ ಅಂತ ಹೇಳ್ತಾ ಇದ್ರಿ. ಈಗ ನ್ಯಾಯಾಲಯ ಮುಡಾ ವಿಚಾರವಾಗಿ ತನಿಖೆ ಆಗಬೇಕು ಅಂತ ಹೇಳುತ್ತಿದೆ. ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪ್ರಚೋದನಕಾರಿ ಹೇಳಿಕೆ – ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾ ಮಾಡಿತು.
ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ಸೂಕ್ತ ನಿರ್ಧಾರವನ್ನೇ ಕೈಗೊಂಡಿದ್ದಾರೆ. ಹೀಗಾಗಿ, ಅರ್ಜಿದಾರ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿತ್ತು.