– ಐಎಎಸ್ ಅಧಿಕಾರಿಗಳ ಹೆಗಲಿಗೆ ತನಿಖೆ ಹೊಣೆ
ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) (MUDA) 50:50 ಸೈಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರ ತಲೆದಂಡವಾಗಿದೆ.
ಮುಡಾದಲ್ಲಿ ಹಗರಣ ನಡೆದಿದೆ ಎಂಬ ಬಿಜೆಪಿ ನಾಯಕರ ಆರೋಪ ಕೇಳಿಬಂದ ಬೆನ್ನಲ್ಲೇ ಸೋಮವಾರ ಸಚಿವ ಬೈರತಿ ಸುರೇಶ್ (Byrathi Suresh) ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ಸಭೆ ನಡೆಸಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ಆಯುಕ್ತರ (MUDA Commissioner) ವರ್ಗಾವಣೆಗೊಳಿಸಿ ಮೌಖಿಕ ಆದೇಶ ಮಾಡಿರುವುದಾಗಿ ತಿಳಿಸಿದ್ದಾರೆ. ಮುಡಾ ಆಯುಕ್ತ, ಕಾರ್ಯದರ್ಶಿ, ಎಇಇ ಕೂಡ ವರ್ಗಾವಣೆಣೆ ಮಾಡಲಾಗಿದೆ. ಇದು ಕ್ರಮ ಅಲ್ಲ, ನಿಷ್ಪಕ್ಷಪಾತ ತನಿಖೆ ಹಿನ್ನೆಲೆ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
50:50 ನಿವೇಶನ ಹಂಚಿಕೆ ಸಂಬಂಧ ತನಿಖೆ ನಡೆಸಲು ಇಬ್ಬರು ಐಎಎಸ್ ಅಧಿಕಾರಿಗಳು (IAS Officer) ಹಾಗೂ ನಾಲ್ಕು ಹೆಚ್ಚುವರಿ ಸಿಬ್ಬಂದಿಯನ್ನ ನೇಮಿಸಲಾಗಿದೆ. ಐಎಎಸ್ ಅಧಿಕಾರಿ ವೆಂಕಟಾಚಲಪತಿ, ಕವಳಗಿ ಅವರನ್ನು ತನಿಖೆಗೆ ನೇಮಿಸಲಾಗಿದ್ದು, 4 ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ಜೊತೆಗೆ ಮುಂದಿನ 1 ತಿಂಗಳು ಯಾವುದೇ ಸೈಟು ಹಂಚಿಕೆ ಮಾಡದಂತೆ, ಮುಡಾದಲ್ಲಿ ಸಭೆ ನಡೆಸದಂತೆ ಆದೇಶಿಸಿದ್ದಾರೆ. ಜೊತೆಗೆ ಈ ಹಿಂದೆ ಹಂಚಿಕೆಯಾಗಿರುವ ಎಲ್ಲಾ ಸೈಟುಗಳನ್ನು ಕೂಡ ತಡೆಹಿಡಿಯಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರ ಅವಧಿಯ ಆದೇಶ ರದ್ದು:
ಮುಡಾ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿವೆ. 7 ತಿಂಗಳ ಹಿಂದೆ ನಾನೇ ಆದೇಶ ಮಾಡಿದ್ದೇನೆ. ತುಂಡು ಭೂಮಿ ಹಂಚಿಕೆ ಮಾಡದಂತೆ ಆದೇಶ ಮಾಡಿದ್ದೇನೆ. ಜೊತೆಗೆ ಬಿಜೆಪಿ ಸರ್ಕಾರ ಇದ್ದಾಗ ಮಾಡಿದ್ದ ಆದೇಶಗಳನ್ನ ರದ್ದು ಮಾಡಲು ಸೂಚನೆ ನೀಡಿದ್ದೇನೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.