ಧಾರವಾಡ: ಮುಡಾ ಅಕ್ರಮಕ್ಕೆ (MUDA Scam) ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ (Parvathi) ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Byrathi Suresh) ಅವರಿಗೆ ಧಾರವಾಡ ಹೈಕೋರ್ಟ್ (Dharwad High Court) ತಾತ್ಕಾಲಿಕ ರಿಲೀಫ್ ನೀಡಿದೆ.
ಇಂದು ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರು 10 ದಿನಗಳ ಕಾಲ ಸಿಎಂ ಪತ್ನಿ ಮತ್ತು ಬೈರತಿ ಸುರೇಶ್ ಅವರಿಗೆ ಹಾಜರಾತಿಯಿಂದ ವಿನಾಯಿತಿ ನೀಡಿ ಆದೇಶ ಪ್ರಕಟಿಸಿದರು.
ಫೆಬ್ರವರಿ 20ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದ್ದು ಅಲ್ಲಿಯವರೆಗೆ ಇಬ್ಬರಿಗೂ ಮಧ್ಯಂತರ ರಕ್ಷಣೆ ಮುಂದುವರಿಯಲಿದೆ.
ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್‌ಗೆ ಹೈಕೋರ್ಟ್ ಮಧ್ಯಂತರ ರಕ್ಷಣೆ ಮುಂದುವರಿದಿದೆ.. ಇಬ್ಬರಿಗೂ ಜಾರಿಯಾಗಿದ್ದ ಸಮನ್ಸ್ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಪೀಠ, ಫೆಬ್ರವರಿ 10ಕ್ಕೆ ವಿಚಾರಣೆ ಮುಂದೂಡಿದೆ.
ಮೊದಲು ಸಚಿವ ಬೈರತಿ ಸುರೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿವಿ ನಾಗೇಶ್, ಬೈರತಿ ಸುರೇಶ್ 2023ರ ಜೂನ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಇಡಿ ಪ್ರಶ್ನಾವಳಿಯಲ್ಲಿ ಅಪ್ಪ, ತಾತ, ಮಕ್ಕಳು, ಮೊಮ್ಮಕ್ಕಳ ಮಾಹಿತಿ ಎಲ್ಲಾ ನೀಡಿ ಎಂದು ಸಮನ್ಸ್ ಮಾಡಿದೆ. ಎಲ್ಲರ ಮಾಹಿತಿಯನ್ನು ಬ್ಯಾಂಕ್ ಡಿಟೈಲ್ಸ್ ಕೊಡಬೇಕೆಂದು ಇಡಿ ಕೇಳುತ್ತಿದೆ. ಸುರೇಶ್ ಗೂ ಈ ಪ್ರಕರಣ ಯಾವುದೇ ಸಂಬಂಧ ಇಲ್ಲ. ಪ್ರಕರಣದಲ್ಲಿ ಅವರು ಆರೋಪಿಯೂ ಅಲ್ಲ, ಆದರೂ ಕೂಡ ಇಡಿ ಸಮನ್ಸ್ ನೀಡಿದೆ.. ಹೀಗಾಗಿ ಕೋರ್ಟ್ ಗೆ ಬಂದಿದ್ದೇವೆ ಎಂದು ವಾದ ಮಂಡಿಸಿದರು.
ಇತ್ತ ಸಿಎಂ ಪತ್ನಿ ಪಾರ್ವತಿ ಪರ ವಾದ ಮಂಡಿಸಿದ ಸಂದೇಶ್ ಚೌಟ, ಪ್ರಕರಣದಲ್ಲಿ ಸೈಟ್‌ಗಳನ್ನು ವಾಪಸ್ ಮಾಡಲಾಗಿದೆ. ಅಕ್ರಮ ಹಣ ವಗಾರ್ವಣೆ ಪ್ರಶ್ನೆಯೇ ಬರುವುದಿಲ್ಲ. ಅಕ್ರಮ ಹಣದ ಗಳಿಕೆಯಿದ್ದರೆ ಮಾತ್ರ ಇಡಿಗೆ ಅಧಿಕಾರವಿದೆ. ಆಗ ಮಾತ್ರ ಇಡಿ ಸರ್ಚ್ ಮತ್ತು ಸೀಜ್ ಮಾಡಬಹುದು. ಆದರೆ ನಟೇಶ್ ಪ್ರಕರಣದಲ್ಲಿ ಇಡಿಯ ದಾಳಿ ಮತ್ತು ಸೀಜ್ ರದ್ದುಪಡಿಸಿದೆ. ಇಡಿ ಕಾನೂನು ಉಲ್ಲಂಘಿಸಿದೆ ಎಂದು ಹೈಕೋರ್ಟ್ ನಮ್ಮ ಪರ ತೀರ್ಪು ನೀಡಿದೆ ಎಂದು ವಾದ ಮಂಡಿಸಿದರು.
ಇಡಿ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಿದ ಕೋರ್ಟ್ ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿತು.
ಏನಿದು ಕೇಸ್?
ಸಿಎಂ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಇಡಿ ಮೇಜರ್ ಟ್ವಿಸ್ಟ್ ನೀಡಿತ್ತು. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ (BM Parvathi) ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಮಾಡಿತ್ತು. ಇಡಿ ಬೆಂಗಳೂರು ವಲಯ ಕಚೇರಿಯ ಸಹಾಯಕ ನಿರ್ದೇಶಕ ವಿ. ಮುರಳಿಕೃಷ್ಣನ್ ಅವರು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಮಾಡಿದ್ದರು. ಇಡಿ ಸಮನ್ಸ್ ಪ್ರಶ್ನಿಸಿ ಸಿಎಂ ಪತ್ನಿ ಹಾಗೂ ಬೈರತಿ ಸುರೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.