ಮೈಸೂರು: ನಗರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಕಬಳಿಸಿರುವುದು, ಒತ್ತುವರಿ ಮಾಡಿಕೊಂಡಿರುವ ನಿವೇಶನಗಳನ್ನು ಪತ್ತೆ ಮಾಡಿ ತನ್ನ ಸುಪರ್ದಿಗೆ ಪಡೆಯುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 80 ಕೋಟಿ ರೂ. ಬೆಲೆ ಬಾಳುವ ನಿವೇಶನವನ್ನು ಸ್ವಾಧೀನಕ್ಕೆ ಪಡೆದುಕೊಳ್ಳುವಲ್ಲಿ ಸಫಲವಾಗಿದೆ.
ಮೈಸೂರು ತಾಲ್ಲೂಕಿನ ಕಸಬಾ ಹೋಬಳಿ ಹಿನಕಲ್ ಗ್ರಾಮದಲ್ಲಿ ಮುಡಾ ಸ್ವಾಧೀನಪಡಿಸಿಕೊಂಡು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ್ದರೂ ವ್ಯಕ್ತಿಯೊಬ್ಬ ಭೂಮಿ ತಮ್ಮದೆಂದು ಹೇಳುತ್ತಿದ್ದ ಜಾಗವನ್ನು ಕಾರ್ಯಾಚರಣೆ ಮೂಲಕ ಸುಪರ್ದಿಗೆ ಪಡೆಯಲಾಗಿದೆ.
ಕಸಬಾ ಹೋಬಳಿ ಹಿನಕಲ್ ಗ್ರಾಮದ ಸರ್ವೆ ನಂ.331/4 ಮತ್ತು 331/5ರಲ್ಲಿ 8 ಎಕರೆ 31 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಮುಡಾ ಪರಿಹಾರವನ್ನು ನೀಡಿತ್ತು. ನಿಯಮಾನುಸಾರ ಸ್ವಾಧೀನ ಪ್ರಕ್ರಿಯೆಗಳು ಮುಗಿದು ಮುಡಾ ವ್ಯಾಪ್ತಿಗೆ ಜಮೀನು ಸೇರಿತ್ತು. ಆದರೆ, ಭೂ ಮಾಲೀಕರು ಭೂಸ್ವಾಧೀನ ಪ್ರಕ್ರಿಯೆ ನಂತರ ಭೂಮಿ ಬಿಟ್ಟು ಕೊಡುವ ಬದಲಿಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನೂ ಓದಿ: ಎಚ್‍ಡಿಡಿ ಫೋಟೋ ತೆಗೆದಿದ್ದು ಯಾಕೆ – ಹಾಸನದಲ್ಲಿ ಜನಪ್ರತಿನಿಧಿಗಳ ಮಧ್ಯೆ ಗಲಾಟೆ
ನ್ಯಾಯಾಲಯವು ಭೂಸ್ವಾಧೀನ ಪ್ರಕ್ರಿಯ ಕಾರ್ಯ ಮುಗಿದ ಮೇಲೆ ತಾವು ಯಾವುದೇ ನಿರ್ದೇಶನ ನೀಡಲು ಬರುವುದಿಲ್ಲವೆಂದು ಹೇಳಿ ಆದೇಶ ನೀಡಿತ್ತು. ಹೀಗಿದ್ದರೂ ಭೂ ಮಾಲೀಕರು ಜಾಗ ತೆರವು ಮಾಡಿರಲಿಲ್ಲ. ಅಧಿಕಾರಿಗಳು ಕೂಡ ದಾಖಲೆಗಳನ್ನು ಪರಿಶೀಲಿಸದಿರುವ ಜೊತೆಗೆ ನ್ಯಾಯಾಲಯದ ಆದೇಶವನ್ನು ಪರಿಗಣಿಸದೆ ಕುಳಿತಿದ್ದರು. ಆದರೆ, ಒಂದು ವರ್ಷದಿಂದ ಮುಡಾ ಆಸ್ತಿಯನ್ನು ಗುರುತು ಮಾಡಿ ಕೈಬಿಟ್ಟು ಹೋಗಿರುವುದನ್ನು ವಾಪಸ್ ಪಡೆಯಲು ಮುಂದಾಗಿರುವ ಆಯುಕ್ತ ಡಾ.ಡಿ.ಬಿ.ನಟೇಶ್ ಅವರು, ಕಳೆದ ಮೂರು ತಿಂಗಳಿನಿಂದ ಸರ್ವೆ ನಂ 331/4, 331/5ರ ಕಡತಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದಲ್ಲದೆ, ನ್ಯಾಯಾಲಯ ನೀಡಿದ್ದ ಆದೇಶದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇದನ್ನೂ ಓದಿ: 1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ
ದಾಖಲೆಗಳು ಮೂಡಾ ಪರವಾಗಿ ಇದ್ದ ಕಾರಣ ಅಕ್ರಮ ತೆರವು ಮಾಡಲಾಗಿದೆ. ಈ ಜಾಗದ ಮಾರುಕಟ್ಟೆ ದರವು ಚದರ ಮೀಟರ್‍ಗೆ 5 ಸಾವಿರ ರೂ. ಇದ್ದು, 8.31 ಎಕರೆಗೆ ಅಂದಾಜು 80 ಕೋಟಿ ರೂ. ಮೌಲ್ಯ ಹೊಂದಿದೆ. ನಿವೇಶನವನ್ನು ಜೆಸಿಬಿ ಯಂತ್ರಗಳಿಂದ ಶುಚಿಗೊಳಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಸ್ತಿಯೆಂದು ಸಾರ್ವಜನಿಕ ಸೂಚನಾ ನಾಮಫಲಕ ಹಾಕುವ ಜತೆಗೆ ಅತಿಕ್ರಮ ಪ್ರವೇಶ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.