ಬೆಳಗಾವಿ: ರಾಜ್ಯ ರಾಜಕೀಯ ಬದಲಾವಣೆ ಬೆಳಗಾವಿಯಿಂದಲೇ (Belagavi) ಆಗುತ್ತಾ ಎಂಬ ಪ್ರಶ್ನೆ ಮತ್ತೆ ಎದ್ದಿದೆ. ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಕರಣ ದಾಖಲಾದ ಬಳಿಕ ಎರಡು ಬಾರಿ ಸತೀಶ್ ಜಾರಕಿಹೊಳಿ (Satish Jarkiholi) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭೇಟಿ ಮಾಡಿದ್ದರಿಂದ ಈ ಪ್ರಶ್ನೆ ಎದ್ದಿದೆ.
ಸಿದ್ದರಾಮಯ್ಯ ಬಿಟ್ಟರೆ ಸದ್ಯ ಅಹಿಂದ ಮತಗಳನ್ನು ಸೆಳೆಯುವ ಶಕ್ತಿ ಸತೀಶ್ ಜಾರಕಿಹೊಳಿ ಅವರಿಗೆ ಇದೆ. ಹೀಗಾಗಿ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಅಭಿಯಾನವನ್ನು ಸತೀಶ್ ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದಾರೆ. ಆದರೆ ಇದಕ್ಕೂ ಖರ್ಗೆ ಭೇಟಿಗೂ ಯಾವುದೇ ಸಂಬಂಧವಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ದೆಹಲಿ ಭೇಟಿ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಸಚಿವ ಜಾರಕಿಹೊಳಿ ಖರ್ಗೆ ಅವರು ನಮ್ಮ ವರಿಷ್ಠರು ದೆಹಲಿಗೆ ಹೋದಾಗ ಭೇಟಿ ಆಗಲೇಬೇಕು. ಖರ್ಗೆ ಅವರ ಭೇಟಿ ಸಹಜ ಭೇಟಿಯಾಗಿದೆ. ರಾಜ್ಯದಲ್ಲಿ ರಾಜಕೀಯವಾಗಿ ಹೊಸ ಬೆಳವಣಿಗೆಗಳು ಕಾಣುತ್ತಿಲ್ಲ. ನಮ್ಮ ಪಕ್ಷದಿಂದ ಸಿಎಂ ಮೇಲೆ ರಾಜೀನಾಮೆಗೆ ಯಾವುದೇ ಒತ್ತಡವಿಲ್ಲ. ಎರಡು ತಿಂಗಳಿನಿಂದ ವಿರೋಧ ಪಕ್ಷಗಳು ಮಾತ್ರ ಒತ್ತಡ ಹಾಕುತ್ತಿವೆ. ಈ ಬಗ್ಗೆ ಕಾನೂನು ರೀತಿಯಾಗಿ ಹೋರಾಟ ಮಾಡುತ್ತೇವೆ. ಮುಡಾ ಪ್ರಕರಣವನ್ನ ಇಡಿ ತನಿಖೆ ನಡೆಸಲಿ ಇದರಿಂದಾಗಿ ಸತ್ಯಾಂಶ ಹೊರಬರುತ್ತದೆ ಎಂದರು. ಇದನ್ನೂ ಓದಿ: ಬೆಳಗಾವಿ ರಾಜಕಾರಣಕ್ಕೆ ಸರ್ಕಾರ ಬೀಳಿಸೋದು, ಉಳಿಸೋದು ಎರಡು ಗೊತ್ತಿದೆ: ಪ್ರಭಾಕರ ಕೋರೆ
ಒಟ್ಟಿನಲ್ಲಿ ದಸರಾ ಬಳಿಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಆಗುವ ಎಲ್ಲ ಸಾಧ್ಯತೆಗಳಿದ್ದು ಸಚಿವ ಸತೀಶ್ ಜಾರಕಿಹೊಳಿ ಈ ಬಾರಿ ಕಿಂಗ್ ಮೇಕರ್ ಆಗುತ್ತಾರಾ ಅಥವಾ ಕಿಂಗ್ ಆಗುತ್ತಾರಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.