– ನಿಗಮದ ಹಣವನ್ನ ಚುನಾವಣೆಯಲ್ಲಿ ಹೆಂಡಕ್ಕೆ ಬಳಸಿದ್ದಾರೆ: ವಿಜಯೇಂದ್ರ
– ದಲಿತರ ಹೆಸ್ರಲ್ಲಿ ಅಧಿಕಾರಕ್ಕೆ ಬಂದು ಮೋಸ ಮಾಡ್ತಿದ್ದಾರೆ: ಮಾಳವಿಕಾ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಹಾಗೂ SCSP-TSP ಹಣ ದುರ್ಬಳಕೆ ಖಂಡಿಸಿ ಎಸ್ಟಿ ಮೋರ್ಚಾದಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರಮುಖ ನಾಯಕರೂ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra), ಶಾಸಕರಾದ ಕೆ.ಗೋಪಾಲಯ್ಯ, ಗೋವಿಂದ ಕಾರಜೋಳ, ಸಿಮೆಂಟ್ ಮಂಜು, ಶ್ರೀವತ್ಸ, ಮಾಜಿ ಸಚಿವ ಕೆ.ಆರ್ ನಾರಾಯಣ ಗೌಡ, ಪರಿಷತ್ ಸದಸ್ಯರು, ಮಾಜಿ ಸಂಸದ ಮುನಿಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಸೇರಿದಂತೆ ಘಟಾನುಘಟಿ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಬಿಜೆಪಿ ನಾಯಕರನ್ನ ಪೊಲೀಸರು ವಶಕ್ಕೆ ಪಡೆದರು.
Advertisement
Advertisement
ಪ್ರತಿಭಟನೆಯಲ್ಲಿ ಯಾರು ಏನ್ ಹೇಳಿದ್ರು?
ಬೃಹತ್ ಪ್ರತಿಭಟನೆಯಲ್ಲಿ ವಾಲ್ಮೀಕಿ ಹಗರಣ ಹಾಗೂ ಮುಡಾ ಹಗರಣಗಳನ್ನ (MUDA Scam Case) ಖಂಡಿಸಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಲೇವಡಿ ಮಾಡಿದರು.
Advertisement
ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ:
ವಾಲ್ಮೀಕಿ ಅಭಿವೃದ್ಧಿ ನಿಗಮ, ಮೈಸೂರು ಮುಡಾದಲ್ಲಿ ಆಗಿರೋದು ಬ್ರಹ್ಮಾಂಡ ಭ್ರಷ್ಟಾಚಾರ. ಕಾಂಗ್ರೆಸ್‌ಗೆ ನೈತಿಕತೆ ಇಲ್ಲ. ಎಸ್ಸಿ-ಎಸ್ಟಿಗೆ ಮೀಸಲಿಟ್ಟ ಹಣವನ್ನ ದುರ್ಬಳಕೆ ಮಾಡಿದ್ದಾರೆ. ಹತ್ತಾರು ಕೋಟಿ ಬಳ್ಳಾರಿ, ಹೊರ ರಾಜ್ಯಗಳ ಚುನಾವಣೆಗಳಿಗೆ ವರ್ಗಾವಣೆ ಆಗಿದೆ. ಚುನಾವಣೆಯಲ್ಲಿ ಹಣ, ಹೆಂಡಕ್ಕೆ ಇದೇ ಹಣವನ್ನು ಬಳಸಿಕೊಳ್ಳಲಾಗಿದೆ. ಇಷ್ಟಾದರೂ ಕಾಂಗ್ರೆಸ್ ಸರ್ಕಾರ ತಾನು ನಿರಪರಾಧಿ ಅಂತ ಹೇಳಿಕೊಳ್ತಿದೆ. ಈ ಹಗರಣದ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು. ಸಿಟ್ಟಿಂಗ್ ಮಿನಿಸ್ಟರ್ ವಾಲ್ಮೀಕಿ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ, ಸಿಎಂ ಗಾಬರಿಯಾಗಿದ್ದಾರೆ. ಸಿಎಂ, ಸಚಿವರು ಸದನಕ್ಕೆ ಬರಲು ಭಯ ಪಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
ಮಾಳವಿಕಾ ಅವಿನಾಶ್:
ಮುಡಾ ಹಾಗೂ ವಾಲ್ಮೀಕಿ ಹಗರಣಗಳ ವಿಚಾರ ರಾಜ್ಯದ ಜನತೆಗೆ ಗೊತ್ತಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ ತೆಲಾಂಗಣಕ್ಕೆ ವರ್ಗಾವಣೆ ಮಾಡಲಾಗಿದೆ. ದಲಿತರ ಹೆಸರಲ್ಲಿ ಅಧಿಕಾರಕ್ಕೆ ಬಂದು, ದಲಿತರಿಗೆ ಕಾಂಗ್ರೆಸ್‌ನವರು ಮೋಸ ಮಾಡ್ತಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಭಾಗಿಯಾಗಿದ್ದು, ನೇರವಾಗಿ ಸಿಕ್ಕಿಹಾಕಿಕೊಂಡಿದ್ದಾರೆ. ದಲಿತರ ಹಣ, ದಲಿತರಿಗೇ ತಲುಪಬೇಕು ಅನ್ನೋ ಕಾರಣಕ್ಕೆ ಈ ಹೋರಾಟ ಆರಂಭವಾಗಿದೆ.
ಸಂಸದ ಗೋವಿಂದ ಕಾರಜೋಳ:
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ದಲಿತರ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಕಾಂಗ್ರೆಸ್‌ನವರಿಗೆ ನಾಚಿಕೆ ಆಗೋದಿಲ್ವಾ? ಹಿಂದಿನಿಂದಲೂ ದಲಿತರ ಹೆಸರಿನಲ್ಲಿ ನಾಟಕ ಆಡ್ತಿದ್ದಾರೆ. ರಾಜೀನಾಮೆ ಕೊಡುವವರೆಗೂ ಎಲ್ಲಾ ಜಿಲ್ಲೆಗಳಲ್ಲಿ ನಿರಂತರ ಹೋರಾಟ ಮಾಡ್ತೇವೆ. ಇವರ ಮೋಸದಾಟವನ್ನು ಬಯಲಿಗೆ ಎಳೆಯಬೇಕು.
ಶಾಸಕ ಎಸ್.ಆರ್ ವಿಶ್ವನಾಥ್:
ಸಿದ್ದರಾಮಯ್ಯ ಹಣಕಾಸು ಸಚಿವರು, ಇಷ್ಟು ದೊಡ್ಡ ಹಗರಣ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೇ ನಡೆಯೋದಿಲ್ಲ. ನಾಗೇಂದ್ರ ಅಕ್ರಮವಾಗಿ ಆ ಹಣವನ್ನು ವರ್ಗಾವಣೆ ಮಾಡಿಸಿದ್ದಾರೆ. ಸಿಬಿಐ, ಎಸ್‌ಐಟಿ, ಇಡಿ ಮೂವರು ಸಹ ಅಕ್ರಮ ನಡೆದಿರೋದಾಗಿ ಹೇಳ್ತಾ ಇದ್ದಾರೆ. ಯಾರೋ ಹೇಳಿದರು ಅಂತ ಇಡಿ ದಾಖಲಾತಿ ಇಲ್ಲದೇ ಅರೆಸ್ಟ್ ಮಾಡೋದಿಲ್ಲ. ನಮ್ಮ ಹೋರಾಟ ನಿರಂತರವಾಗಿರುತ್ತೆ.
ವಿಜಯೇಂದ್ರ ವಶಕ್ಕೆ:
ಪ್ರತಿಭಟನಾ ಮೆರವಣಿಗೆಯಲ್ಲಿ ವಿಧಾನಸೌಧಕ್ಕೆ ಮುತ್ತಿಗೆಹಾಕಲು ತೆರಳುತ್ತಿದ್ದ ವೇಳೆ ಶಾಸಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ದೊಡ್ಡ ಪ್ರಮಾಣದಲ್ಲೇ ಆಯಿತು. ಕಾರ್ಯಕರ್ತರು ಬ್ಯಾರಿಕೇಡ್ ಕಿತ್ತೆಸೆದು ಆಕ್ರೋಶ ಹೊರಹಾಕಿದರು, ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು.