ಬೆಂಗಳೂರು: ಮೈತ್ರಿ ಸರ್ಕಾರದ ನಾಯಕತ್ವದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಚಿವ ಎಂಟಿಬಿ ನಾಗರಾಜ್ ಅವರ ಮನವೊಲಿಕೆ ಬಹುತೇಕ ಯಶಸ್ವಿಯಾಗಿದೆ. ಆದರೆ ಈ ಸಂದರ್ಭದಲ್ಲಿ ಎಂಟಿಬಿ ಅವರು ಕೆಲ ಷರತ್ತುಗಳನ್ನು ಹಾಕಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಎಂಟಿಬಿ ನಿವಾಸದ ಬಳಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಕಳೆದ 30 ವರ್ಷಗಳಿಂದ ಎಂಟಿಬಿ ನಾಗರಾಜ್ ಸೇರಿದಂತೆ ನಮ್ಮ ನಾಯಕರು ಪಕ್ಷದ ಸಂಘಟನೆಯನ್ನು ಮಾಡಿದ್ದಾರೆ. ಆದರೆ ಇಂದು ಕೆಲ ಸಣ್ಣ ಸಮಸ್ಯೆಗಳ ಕಾರಣದಿಂದ ಅಸಮಾಧಾನಗೊಂಡಿದ್ದಾರೆ. ಅವರ ಅಸಮಾಧಾನ ಬಗೆಹರಿಸಲು ಡಿಸಿಎಂ ಪರಮೇಶ್ವರ್ ಸೇರಿದಂತೆ ನಾವು ಒಟ್ಟಿಗೆ ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದೇವೆ ಎಂದರು.
Advertisement
Advertisement
ಎಂಟಿಬಿ ನಾಗರಾಜ್ ಅವರು ನಮ್ಮ ಮನವೊಲಿಕೆಗೆ ಬಹುತೇಕ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಇತರೆ ಅಸಮಾಧಾನಿತ ಶಾಸಕರ ಮನವೊಲಿಕೆಗೂ ಮುಂದಾಗಲಿದ್ದಾರೆ. ಇದ್ದರೆ ಒಟ್ಟಿಗೆ ಇರೋಣ, ಒಟ್ಟಿಗೆ ಸಾಯೋಣ ಎಂಬ ಚರ್ಚೆ ಮಾಡಿದ್ದೇವೆ. ಇದಕ್ಕೆ ಅವರು ಕೂಡ ಸಮ್ಮತಿ ಸೂಚಿಸಿದ್ದಾರೆ. ಪಕ್ಷದಲ್ಲೇ ಅವರು ಉಳಿಯಲಿದ್ದಾರೆ ಎಂಬ ನಂಬಿಕೆ ಇದೆ ಎಂದರು.
Advertisement
ಇದಕ್ಕೂ ಮುನ್ನ ಮಾತನಾಡಿದ ಎಂಟಿಬಿ ನಾಗರಾಜ್, ಪಕ್ಷದ ನಾಯಕರಿಗೆ ಅಭಿಮಾನ ಪೂರ್ವಕವಾಗಿ ಸ್ವಾಗತ ಬಯಸಿದ್ದೇನೆ. ನಾನು ಅವರ ಮಾರ್ಗದರ್ಶನದಲ್ಲಿ ರಾಜಕೀಯವಾಗಿ ಬೆಳೆದು ಬಂದವನು. ಆದ್ದರಿಂದ ಕಾಂಗ್ರೆಸ್ ನಲ್ಲಿಯೇ ಉಳಿಯಬೇಕು ಎಂದು ಸಿದ್ದರಾಮಯ್ಯ ಅವರು ಸೇರಿದಂತೆ ಪಕ್ಷದ ಎಲ್ಲಾ ನಾಯಕರು ಮನವೊಲಿಕೆ ಮಾಡಿದ್ದಾರೆ. ನಾನು, ಶಾಸಕ ಸುಧಾಕರ್ ಸೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಮಯಾವಕಾಶ ಕೇಳಿದ್ದೇನೆ. ಸುಧಾಕರ್ ಸೇರಿದಂತೆ ಎಲ್ಲರೂ ಇಲ್ಲೇ ಉಳಿಯುವ ಪ್ರಯತ್ನ ಮಾಡುತ್ತೇವೆ ಎಂದರು.
Advertisement
ಎಂಟಿಬಿ ನಾಗರಾಜ್ ಮನವೊಲಿಕೆಗೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಡಿ.ಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವ ಬೇಡಿಕೆಯನ್ನ ನಾಗರಾಜ್ ಅವರು ಇಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಹಿಂದೆ ಸಮಸ್ಯೆಗಳ ಬಗ್ಗೆ ಬಂದು ಹೇಳಿದಾಗ ಒಬ್ಬರೂ ಕಿವಿಗೆ ಹಾಕಿ ಕೊಳ್ಳಲಿಲ್ಲ. ಈಗ ಬಂದು ಕಥೆ ಹೇಳುತ್ತೀರಾ ಎಂದು ಎಂಟಿಬಿ ನಾಗರಾಜ್ ಅವರು ಗರಂ ಆಗಿದ್ದರು.
ನನಗೆ ಜೀವನದಲ್ಲಿ ಒಂದು ಬಾರಿ ಸಚಿವನಾಗಬೇಕು ಎಂಬ ಆಸೆ ಇತ್ತು. ಸಚಿವನಾಗಿದ್ದೇನೆ ಸಾಕು. ಬಿಜೆಪಿಗೆ ಹೋಗಬೇಕು ಮತ್ತೆ ಸಚಿವನಾಗಬೇಕು ಎಂಬ ಆಸೆ ಇಲ್ಲ. ಆದರೆ ಯಾರಿಗೆ ಪ್ರಯೋಜನ, ನೆಮ್ಮದಿ ಕೊಡದ ಈ ಸರ್ಕಾರ ಬೇಡ ಅಷ್ಟೇ ಎಂದು ಖಡಕ್ ಆಗಿ ಹೇಳಿದ್ದರು ಎನ್ನಲಾಗಿತ್ತು. ಆದರೆ ಡಿಕೆ ಶಿವಕುಮಾರ್ ಬಳಿಕ ಕಾಂಗ್ರೆಸ್‍ನ ಎಲ್ಲಾ ನಾಯಕರು ಎಂಟಿಬಿ ನಾಗರಾಜ್ ಅವರ ಮನವೊಲಿಕೆ ಅಲ್ಪಮಟ್ಟಿಗೆ ಯಶಸ್ಸು ಕಂಡಿದ್ದಾರೆ ಎನ್ನಲಾಗಿದೆ.