ಬೆಂಗಳೂರು: ಸಿದ್ದರಾಮಯ್ಯ ಅವರ ಜೊತೆಯಲ್ಲಿಯೇ ಇದ್ದ ಕೆಲ ಆಪ್ತರು ಈಗ ರಾಜೀನಾಮೆ ನೀಡಿದ್ದಾರೆ. ಇದರಿಂದ ಅವರಿಗೆ ನೋವಾಗಿದೆ, ಆದ್ದರಿಂದಲೇ ಬ್ಲಾಕ್ ಶಿಪ್ ಎಂದು ಹೇಳಿದ್ದಾರೆ. ಆದರೆ ಈಗಲೂ ನನ್ನ ನಾಯಕ ಸಿದ್ದರಾಮಯ್ಯ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್ ಅವರು, ಮೈತ್ರಿ ಸರ್ಕಾರದ ವೈಫಲ್ಯಗಳ ಕಾರಣದಿಂದಲೇ ನಾವು ರಾಜೀನಾಮೆ ನೀಡಿದ್ದೇನೆ. ಮುಂಬೈಗೂ ತೆರಳಿಲ್ಲ, ದೆಹಲಿಗೂ ಹೋಗಿಲ್ಲ. ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ನಮ್ಮ ಬಳಿ ಮಾತನಾಡಿದ್ದಾರೆ. ಆದರೆ ರಾಜೀನಾಮೆ ಹಿಂಪಡೆಯುವ ನಿರ್ಧಾರ ಮಾಡಿಲ್ಲ ಎಂದರು.
ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಕಾರಣ ನಾನೇ ಹಲವು ಬಾರಿ ಶಾಸಕರ ಅಸಮಾಧಾನದ ಬಗ್ಗೆ ಮಾತನಾಡಿದ್ದೆ. ಆದರೆ ಸಮ್ಮಿಶ್ರ ಸರ್ಕಾರ ನಾಯಕತ್ವದಲ್ಲಿ ಸರ್ಕಾರ ವೈಫಲ್ಯ ಅನುಭವಿಸಿದೆ. ಆದ್ದರಿಂದಲೇ ನಾನು ಪಕ್ಷ ತೊರೆಯುವ ತೀರ್ಮಾನ ಮಾಡಿದ್ದೆ. ನಾವು ರಾಜೀನಾಮೆ ನೀಡುವ ಮುನ್ನ ಯಾರು ನಮ್ಮ ಬೇಸರ ಬಗೆಹರಿಸುವ ಕಾರ್ಯ ಮಾಡಿಲ್ಲ. ಶಾಸಕರಾದ ಡಾ.ಸುಧಾಕರ್ ಸೇರಿದಂತೆ ನಮ್ಮೊಂದಿಗೆ ಮತ್ತಷ್ಟು ಶಾಸಕರು ಇದ್ದು, ಎಲ್ಲರೊಂದಿಗೂ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಅಡ್ಡಗೋಡೆ ಮೇಲಿದ್ದೀನಿ: ನಾವು ಇಬ್ಬರು ಶಾಸಕರು ಬೆಂಗಳೂರಿನಲ್ಲೂ ಇದ್ದು, ಸಿದ್ದರಾಮಯ್ಯ ಅವರಿಗೆ ನಮ್ಮ ಮೇಲೆ ವಿಶ್ವಾಸ ಇದೆ. ಸಿದ್ದರಾಮಯ್ಯ ಅವರ ಬಗ್ಗೆ ಬೇಸರ ಇಲ್ಲ. ಮೈತ್ರಿ ಸರ್ಕಾರ ವೈಫಲ್ಯಗಳ ಬಗ್ಗೆ ಬೇಸರ ಇದೆ. ಮೈತ್ರಿ ಸರ್ಕಾರ ಸಮಾನತೆ ಧರ್ಮ ಪಾಲಿಸಿಲ್ಲ. ಅಲ್ಲದೇ ನಾವು ಮುಖ್ಯಮಂತ್ರಿಗಳ ಬದಲಾವಣೆಗೂ ಕೇಳಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಾನು ರಾಜೀನಾಮೆ ಹಿಂಪಡೆಯುವ, ಪಡೆಯದಿರುವ ಬಗ್ಗೆಯೂ ಯಾವುದೇ ಗಟ್ಟಿ ತೀರ್ಮಾನ ಮಾಡಿಲ್ಲ. ಅಡ್ಡಗೋಡೆ ಮೇಲೆ ನಿಂತಿದ್ದೇನೆ. ಎಲ್ಲರೂ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.