ಬೆಂಗಳೂರು: ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಜಗ್ಗದ ಅತೃಪ್ತ ಶಾಸಕ ಎಂ.ಟಿ.ಬಿ ನಾಗರಾಜ್ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಎಂಟಿಬಿ ನಾಗರಾಜ್ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆಪ್ತ ಸಂತೋಷ್ ಕೂಡ ಕಾಣಿಸಿಕೊಂಡಿದ್ದಾರೆ.
ಎಂಟಿಬಿ ನಾಗರಾಜ್ ಬೆಂಗಳೂರಿನಿಂದ ವಿಶೇಷ ವಿಮಾನವನ್ನು ಏರಿ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ ಎಂಟಿಬಿ ನಾಗರಾಜ್ ಅವರನ್ನು ವಿಮಾನ ಹತ್ತಿಸುವವರೆಗೂ ಅವರ ಹಿಂದೆ ಸಂತೋಷ್ ಜೊತೆಯಲ್ಲೇ ಇದ್ದರು. ಈ ಮೂಲಕ ಬಿಎಸ್‍ವೈ ಆಪ್ತ ಸಂತೋಷ್‍ನ ಮೂರನೇ ಆಪರೇಷನ್ ಇದಾಗಿದೆ. ಇದನ್ನೂ ಓದಿ: ಒಂದೇ ದಿನ 2 ಡ್ರೆಸ್ – ಕನಕಪುರದ ಬಂಡೆಗೆ ಚಮಕ್ ಕೊಟ್ಟ ಸಂತೋಷ್
ಈ ಹಿಂದೆ ಪಕ್ಷೇತರರಾದ ಶಂಕರ್ ಮತ್ತು ನಾಗೇಶ್ ಅವರನ್ನು ಹೈಜಾಕ್ ಮಾಡಿ ಮುಂಬೈಗೆ ಕಳುಹಿಸಿ ಯಶಸ್ವಿಯಾಗಿದ್ದರು. ಇದೀಗ ಎಂಟಿಬಿ ನಾಗರಾಜ್ ಅವರನ್ನು ವಿಮಾನ ಹತ್ತಿಸಿ ಮುಂಬೈಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಅವರು ಮಾತ್ರ ರಹಸ್ಯವಾಗಿ ತಮ್ಮ ಪ್ಲಾನ್ ಮಾಡುತ್ತಿದ್ದಾರೆ. ಎಂಟಿಬಿ ನಾಗರಾಜ್ ಜೊತೆ ಆರ್.ಅಶೋಕ್ ಕೂಡ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಶನಿವಾರಷ್ಟೆ ಮಧ್ಯರಾತ್ರಿ 1 ಗಂಟೆ ಸುಮಾರಿನಿಂದ ಮಧ್ಯಾಹ್ನದವರೆಗೂ ಡಿ.ಕೆ.ಶಿವಕುಮಾರ್, ಪರಮೇಶ್ವರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಎಂಟಿಬಿ ಅವರ ಮನವೊಲಿಕೆ ಮಾಡಲು ಪ್ರಯತ್ನ ಮಾಡಿದ್ದರು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಎಂಬಂತೆ ರಾಜೀನಾಮೆ ವಾಪಸ್ ಪಡೆಯಲು ಕಾಲಾವಕಾಶ ಕೇಳಿದ್ದರು. ಬಳಿಕ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಬಿಡಲಾಗಿತ್ತು. ಅಲ್ಲಿ ಕೂಡ ಸಿದ್ದರಾಮಯ್ಯ ಎಂಟಿಬಿ ನಾಗರಾಜ್ ಮನವೊಲಿಕೆ ಮಾಡಿದ್ದರು.
ಸಂಜೆ ಮಾಧ್ಯಮಗಳ ಮುಂದೆ ಮಾತನಾಡುವಾಗ ರಾಜೀನಾಮೆ ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ ಸಿದ್ದರಾಮಯ್ಯ ಹೋದ ತಕ್ಷಣ ರಾಜೀನಾಮೆ ಪಡೆಯಲು ಸಮಯ ಕೇಳಿದ್ದೇನೆ ಎಂದಿದ್ದರು. ಜೊತೆಗೆ ನಾನು ಮುಂಬೈಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಇದೀಗ ಅವರು ಮುಂಬೈಗೆ ತೆರಳಿದ್ದು, ಈ ಮೂಲಕ ಸುಧಾಕರ್ ಮನವೊಲಿಕೆಯ ನೆಪದಲ್ಲಿ ಅತೃಪ್ತರ ಬಣವನ್ನು ಸೇರುತ್ತಾರ ಎಂಬ ಪ್ರಶ್ನೆ ಮೂಡಿದೆ. ಇತ್ತ ಸುಧಾಕರ್ ಅವರು ಶನಿವಾರವೇ ಮುಂಬೈಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.