ಬೆಂಗಳೂರು: ನನ್ನನ್ನು ಗುಳ್ಳೆ ನರಿ ಎಂಬುವವರು ಹುಲಿ, ಸಿಂಹಗಳ ರೀತಿಯಲ್ಲಿಯೇ ಇರಲಿ ನಾನು ಗುಳ್ಳೆನರಿ ತರಾನೆ ಇದ್ದು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಅವರಿಗೆ ಟಾಂಗ್ ನೀಡಿದ್ದಾರೆ.
ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲೂರಹಳ್ಳಿಯ ಕಾಮಗಾರಿಗಳ ಗುದ್ದಲಿ ಪೂಜೆ ಬಳಿಕ ಕಾರ್ಯಕರ್ತರ ಸಭೆ ನಡೆಸಿ ಎಂಟಿಬಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ವೇಳೆ ಶರತ್ ಬಚ್ಚೇಗೌಡರ ಗುಳ್ಳೆ ನರಿ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ನನ್ನನ್ನು ಗುಳ್ಳೆ ನರಿ ಎನ್ನುವವರು ಹುಲಿ ಸಿಂಹಗಳ ರೀತಿಯಲ್ಲಿಯೇ ಇರಲಿ. ನಾನು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ. ನಾನು ಬೇಧ ಭಾವದಿಂದ ಜನರಿಗೆ ಅನ್ಯಾಯ ಮಾಡಿದ್ದರೆ ಈಶ್ವರನೇ ನೋಡಿಕೊಳ್ಳುತ್ತಾನೆ ಎಂದರು.
ನಾನು ದೇವರ ಬಳಿಕ ಮತದಾರರನ್ನೇ ದೇವರೆಂದು ತಿಳಿದು ಆತ್ಮದಲ್ಲಿಟ್ಟುಕೊಂಡಿರುವವನು. ಈ ಬಾರಿ ತಾಲೂಕಿನಲ್ಲಿ ಶಾಸಕನಾಗಿ ಮಂತ್ರಿಯಾಗಿ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಎರಡೂವರೆ ಲಕ್ಷ ರೂಪಾಯಿಗಳ ಸಂಬಳ ತೆಗೆದುಕೊಂಡು ಕಾರಿನಲ್ಲಿ ಓಡಾಡಿಕೊಂಡಿದ್ದೆ ಅಷ್ಟೇ ಅದಕ್ಕೆ ಮೈತ್ರಿ ಸರ್ಕಾರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಮುಂಬರುವ ಉಪ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ. ಕಳೆದ ಹತ್ತು ವರ್ಷದಲ್ಲಿ ಏನು ಕೆಲಸ ಮಾಡಿದ್ದೇನೆ ಎಂದು ನೋಡಿ ಗೆಲ್ಲಿಸಬೇಡಿ, ಈ ಮೂರೂವರೆ ವರ್ಷ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲು ಶ್ರಮಿಸುತ್ತೇನೆಂದು ಮತದಾರರಲ್ಲಿ ಕೇಳಿಕೊಳ್ಳುತ್ತೇನೆಂದು ತಿಳಿಸಿದರು.