ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ಉರುಳಲು ಕಾರಣರಾಗಿದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಕ್ಷೇತ್ರದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್ ಅವರು, ರಾಮಲಿಂಗಾರೆಡ್ಡಿ ಅವರು ನಮ್ಮನ್ನು ನಂಬಿಸಿ ಮೋಸ ಮಾಡಿದರು ಎಂದು ಆರೋಪಿಸಿದರು. ನಾವು ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲ್ಲ ಎಂದು ಹೇಳಿ ಮತ್ತೆ ಕಾಂಗ್ರೆಸ್ ಸೇರುವುದಿಲ್ಲ ಎಂಬುವುದನ್ನು ಸ್ಪಷ್ಟ ಪಡಿಸಿದರು.
Advertisement
Advertisement
ನಮಗೆ ಬಿಜೆಪಿ ನಾಯಕರು ಮೊದಲೇ ರಾಮಲಿಂಗಾರೆಡ್ಡಿ ಅವರನ್ನು ನಂಬಬೇಡಿ, ಆತ ಅಲ್ಲೊಂದು, ಇಲ್ಲೊಂದು ಕಾಲಿಟ್ಟಿದ್ದಾರೆ ಎಂದು ಹೇಳಿದ್ದರು. ಆದರೆ ನಾವು ಅವರ ಮಾತನ್ನು ಕೇಳಿಸಿಕೊಳ್ಳದೆ ಇವರನ್ನು ನಂಬಿದ್ದೇವು. ಅಲ್ಲದೇ ಮುಂಬೈಗೆ ಬನ್ನಿ ಎಂದು ಕರೆದರೆ, ಇಲ್ಲ ನೀವು ಹೋಗಿ ನಾನು ಇಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದಿದ್ದರು. ಆದರೆ ಕೊನೆಗೆ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ರಾಜೀನಾಮೆ ಪಡೆದೆ ಎಂದು ಹೇಳಿದರು. ಆದರೆ ಅದಕ್ಕೂ ಮುನ್ನ ಸರ್ಕಾರ ತೆಗೆಯುವುದೇ ನನ್ನ ಉದ್ದೇಶ ಎಂದು ರಾಮಲಿಂಗಾರೆಡ್ಡಿ ಹೇಳಿದ್ದರು. ರಾಜೀನಾಮೆ ನೀಡುವ ಮುನ್ನ 3 ದಿನ ನಿರಂತರವಾಗಿ ನಾನು ಅವರೊಂದಿಗೆ ಮಾತನಾಡಿದ್ದೆ ಎಂದು ಅಂದಿನ ಬೆಳವಣಿಗೆಗಳನ್ನು ಎಂಟಿಬಿ ವಿವರಿಸಿದರು.
Advertisement
ಇದೇ ವೇಳೆ ತಮ್ಮ ರಾಜಕೀಯ ಗುರು ಸಿದ್ದರಾಮಯ್ಯ ಅವರ ವಿರುದ್ಧವೂ ಗುಡುಗಿದ ಎಂಟಿಬಿ, ಸಿದ್ದರಾಮಯ್ಯ ಅವರ ಹಿಂದೆ ಇಡೀ ಕುರುಬ ಸಮಾಜ ನಿಂತಿತ್ತು. ಆದರೆ ಕುರುಬ ಸಮಾಜಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಶೂನ್ಯ. ಮುಖ್ಯಮಂತ್ರಿಯಾಗಿದ್ದರು ಸಮಾಜಕ್ಕೆ ಒಂದು ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಮಾಡಲಿಲ್ಲ. ನನಗೆ ಟಿಕೆಟ್ ಕೊಟ್ಟಿದ್ದು ಸಿದ್ದರಾಮಯ್ಯ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅಂದು ನನಗೆ ಟಿಕೆಟ್ ಕೊಟ್ಟಿದ್ದು ಎಸ್.ಎಂ ಕೃಷ್ಣ ಅವರು. ಕಾಂಗ್ರೆಸ್ ಪಕ್ಷದಲ್ಲಿ ನನಗೆ ಟಿಕೆಟ್ ಸಿಕ್ಕ ಸಂದರ್ಭದಲ್ಲಿ ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದರು. ಆ ಪಕ್ಷದಲ್ಲಿ ಇದ್ದುಕೊಂಡು ಕಾಂಗ್ರೆಸ್ ಪಕ್ಷದಿಂದ ನನಗೆ ಹೇಗೆ ಟಿಕೆಟ್ ಕೊಟ್ಟಿದ್ದೀರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
Advertisement
ಕಾಂಗ್ರೆಸ್ಸಿನಲ್ಲಿ ಒಳಜಗಳ ಹೆಚ್ಚಾಗಿದ್ದು, ಮೂಲ ಕಾಂಗ್ರೆಸಿಗರು ನಾವು, ವಲಸೆ ಬಂದವರು ಅವರು ಎಂದು ಜಗಳ ನಡೆಯುತ್ತಿದೆ. ಕೆಲವರು ಸಿದ್ದರಾಮಯ್ಯ ಇರಲಿ ಎಂದರೆ ಮತ್ತೆ ಕೆಲ ನಾಯಕರು ಅವರನ್ನು ತೆಗೆಯಬೇಕು ಎನ್ನುತ್ತಾರೆ. ಇವುಗಳನ್ನು ನೀವು ದಿನ ಮಾಧ್ಯಮಗಳಲ್ಲಿ ವೀಕ್ಷಿಸುತ್ತಿದ್ದೀರಿ. ದೇಶದ ರಾಜಕಾರಣದಲ್ಲೂ ಕಾಂಗ್ರೆಸ್‍ನಲ್ಲಿ ಇದೇ ಜಗಳ ನಡೆಯುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಇಲ್ಲ. ಇನ್ನೂ ಮುಂದೇ ಬರುವುದಿಲ್ಲ. ಮೋದಿ ಇರುವವರೆಗೂ ಅವರದ್ದೇ ಆಡಳಿತ ಮುಂದುವರಿಯುತ್ತದೆ. ನಾನು ರಾಜೀನಾಮೆ ನೀಡಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿಯ ಯೋಜನೆಗಳನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂಬ ಕಾರಣಕ್ಕೆ ಅಷ್ಟೇ ಎಂದು ಕ್ಷೇತ್ರದ ಜನರಿಗೆ ಸ್ಪಷ್ಟನೆ ನೀಡಿದರು.