ಬೆಂಗಳೂರು: ಕಾಂಗ್ರೆಸ್ ನಾಯಕರು 15 ಗಂಟೆ ಮನವೊಲಿಸಿದರೂ ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಮುಂಬೈ ವಿಮಾನ ಹತ್ತಿ ಅತೃಪ್ತರ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಎಂಟಿಬಿ ನಾಗರಾಜ್ ಬಿಜೆಪಿಗೆ ಜಂಪ್ ಆಗಲು ಅಸಲಿ ಕಾರಣ ಏನು ಎಂಬುದರ ಇನ್‍ಸೈಡ್ ಸ್ಟೋರಿ ಇಲ್ಲಿದೆ.
ಹೊಸಕೋಟೆಯಲ್ಲಿ ಹಳೇ ಹುಲಿಗಳ ನಡುವೆ ಬಿಜೆಪಿ ಸಂಧಾನ ಮಾಡಿಸಿದ್ದೆ ಎಂಟಿಬಿ ಬಿಜೆಪಿಗೆ ಜಂಪ್ ಆಗಲು ಮೊದಲನೇ ಕಾರಣ ಎಂದು ಹೇಳಲಾಗುತ್ತಿದೆ. ಎಂಟಿಬಿ ನಾಗರಾಜ್ ಮತ್ತು ಸಂಸದ ಬಿ.ಎನ್ ಬಚ್ಚೇಗೌಡರ ನಡುವೆ ಸುಮಾರು 30 ವರ್ಷಗಳಿಂದ ವೈಮನಸ್ಸಿತ್ತು. ಇದನ್ನ ಅರಿತ ಬಿಜೆಪಿ ಎಂಟಿಬಿ ನಾಗರಾಜ್ ಅವರನ್ನು ಸಂಸದ ಬಿ.ಎನ್ ಬಚ್ಚೇಗೌಡರ ಜೊತೆ ಕೂರಿಸಿ ಮಾತನಾಡಿಸಿತ್ತು. ಇಬ್ಬರಿಗೂ ತಮ್ಮ ತಮ್ಮ ಕಾರ್ಯವ್ಯಾಪ್ತಿ ಬಗ್ಗೆ ಬಿಡಿಸಿ ಬಿಜೆಪಿ ಪಡೆ ಹೇಳಿತ್ತು. ಆಗ ಭವಿಷ್ಯದ ದೃಷ್ಟಿಯಿಂದ ಬಿಜೆಪಿಗೆ ಜಂಪ್ ಆಗಲು ಎಂಟಿಬಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇತ್ತ ಎಂಟಿಬಿ ನಾಗರಾಜ್ ಪುತ್ರ ನಿತಿನ್‍ಗೆ ಹೊಸಕೋಟೆ ವಿಧಾನಸಭೆ ಬಿಜೆಪಿ ಟಿಕೆಟ್ ಕೊಡುವುದು. ಸಂಸದ ಬಚ್ಚೇಗೌಡರ ಪುತ್ರ ಶರತ್‍ಗೆ ಮುಂದಿನ ಲೋಕಸಭೆ ಟಿಕೆಟ್ ಕೊಡುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಹೀಗಾಗಿ ಎಂಟಿಬಿ ನಾಗರಾಜ್ ಅವರು ರಾಜಕೀಯವಾಗಿ ಸನ್ಯಾಸ ತೆಗೆದುಕೊಳ್ಳಲು ನಿರ್ಧರಿಸಿದ್ದು, ಮುಂದೆ ಚುನಾವಣೆಯಲ್ಲೂ ಸ್ಪರ್ಧೆ ಮಾಡದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಎಂಟಿಬಿ ಪುತ್ರ ನಿತಿನ್ ಗರುಡಾಚಾರ್ ಪಾಳ್ಯದ ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದಾರೆ. ಎಂಟಿಬಿಯಿಂದ ತೆರವಾಗುವ ಸ್ಥಾನಕ್ಕೆ ನಿತಿನ್ ಉಪ ಚುನಾವಣೆಯಲ್ಲಿ ನಿತಿನ್‍ಗೆ ಬಿಜೆಪಿ ಟಿಕೆಟ್ ಕೊಡುವುದು ಖಚಿತವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನಲ್ಲಿದ್ದರೆ ಮಗನಿಗೆ ಭವಿಷ್ಯವಿಲ್ಲ ಎಂದ ಅರಿತ ಎಂಟಿಬಿ ಬಿಜೆಪಿಗೆ ಜಂಪ್ ಆಗಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.