ಬೆಂಗಳೂರು : ಉಪ ಚುನಾವಣೆ ಸೋಲಿನಿಂದ ಆಕ್ರೋಶಗೊಂಡಿರೊ ಮಾಜಿ ಸಚಿವ ಎಂಟಿಬಿ ನಾಗರಾಜ್, ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡರ ವಿರುದ್ಧ ಕೆಂಡ ಕಾರುತ್ತಲೇ ಇದ್ದಾರೆ. ಬಚ್ಚೇಗೌಡರ ಮೇಲೆ ಕ್ರಮ ಆಗಬೇಕು ಅಂತ ಬಿಜೆಪಿ ಹೈಕಮಾಂಡ್ ಗೆ ಒತ್ತಾಯ ಮಾಡ್ತಾನೆ ಇದ್ದಾರೆ. ಈ ಮಧ್ಯೆ ಬದ್ದ ವೈರಿಗಳಾಗಿರೋ ಎಂಟಿಬಿ ನಾಗರಾಜ್ ಮತ್ತು ಬಚ್ಚೇಗೌಡ ಇವತ್ತು ಸಿಎಂ ಮನೆಯಲ್ಲಿ ಮುಖಾಮುಖಿ ಆದ್ರು. ಆದ್ರೆ ಒಬ್ಬರನ್ನೊಬ್ಬರು ಮಾತಾಡಿಸದೇ ತಮ್ಮ ಹಗೆ ಮುಂದುವರಿಸಿದ ಘಟನೆಯೂ ನಡೆಯಿತು.
ಹುಟ್ಟುಹಬ್ಬದ ಶುಭಾಶಯ ತಿಳಿಸಲು ಸಂಸದ ಬಚ್ಚೇಗೌಡರು ಸಿಎಂ ಯಡಿಯೂರಪ್ಪನವರ ಮನೆಗೆ ಬಂದಿದ್ದರು. ಸಿಎಂಗೆ ಶುಭಾಶಯ ತಿಳಿಸಿ ಹೊರಡುವ ವೇಳೆಗೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಸಿಎಂ ಮನೆಗೆ ಬಂದರು.
ಈ ವೇಳೆ ಎಂಟಿಬಿ ನಾಗರಾಜ್ ಬಂದ ಕೂಡಲೇ ಸಿಎಂ ಮನೆಯಿಂದ ತೆರಳಲು ಬಚ್ಚೇಗೌಡರು ಮುಂದಾದರು. ಸಿಎಂ ನಿವಾಸದ ಕಾರಿಡಾರ್ ನಲ್ಲಿ ಇಬ್ಬರು ನಾಯಕರು ಮುಖಾಮುಖಿಯಾದರು. ಆದ್ರೆ ಅವರ ಮುಖ ಇವರು ನೋಡದೆ ಇವ್ರ ಮುಖ ಅವರು ನೋಡದೆ ಹಾಗೆ ಇಬ್ಬರು ಹೊರಟು ಹೋದರು. ಏಕ ಕಾಲದಲ್ಲಿ ಸಿಎಂ ಮನೆಯಲ್ಲಿ ಇಬ್ಬರು ನಾಯಕರು ಬಂದಿದ್ದು ಒಂದಿಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ತಮ್ಮ ಸೋಲಿಗೆ ಬಚ್ಚೇಗೌಡರೇ ಕಾರಣ ಅನ್ನೋದು ಎಂಟಿಬಿ ನಾಗರಾಜ್ ಆರೋಪ. ತಮ್ಮ ಮಗ ಶರತ್ ಗೆಲುವಿಗೆ ಬಿಜೆಪಿ ಸಂಸದರಾದರು ಶರತ್ ಪರ ಕೆಲಸ ಮಾಡಿದ್ದರು. ಇದ್ರೀಂದಲೇ ನಾನು ಸೋತೆ ಅನ್ನೋದು ಎಂಟಿಬಿ ನಾಗರಾಜ್ ವಾದ. ಹೀಗಾಗಿ ಸಿಎಂ ಭೇಟಿ ಮಾಡಿದಾಗಲೆಲ್ಲ ಬಚ್ಚೇಗೌಡರ ವಿರುದ್ಧ ಕ್ರಮ ತೆಗೆದುಕೊಳ್ಳಿ ಅಂತ ಎಂಟಿಬಿ ನಾಗರಾಜ್ ಒತ್ತಡ ಹಾಕುತ್ತಾನೆ ಇದ್ದಾರೆ. ಆದ್ರೆ ಸಿಎಂ ಹಾಗೂ ಕೇಂದ್ರದ ನಾಯಕರು ಈವರೆಗೂ ಕ್ರಮ ತೆಗೆದುಕೊಂಡಿಲ್ಲ. ಈ ಮಧ್ಯೆ ಇಬ್ಬರು ನಾಯಕರು ಸಿಎಂ ಮನೆಯಲ್ಲಿ ಮುಖಾಮುಖಿ ಭೇಟಿಯಾಗಿದ್ದು ವಿಶೇಷ ಎನಿಸಿತು.