ಒಂದೇ ಕೈಯಲ್ಲಿ ಜಡೇಜಾ ಕ್ಯಾಚ್‌ – 10 ವರ್ಷದ ಹಿಂದೆ ʼಸರ್‌ ಜಡೇಜಾʼ ಎಂದಿದ್ದ ಧೋನಿ ಟ್ವೀಟ್‌ ವೈರಲ್‌

Public TV
1 Min Read
jadeja

ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ (MS Dhoni) ಅವರು 10 ವರ್ಷದ ಹಿಂದೆ ಆಲ್‌ರೌಂಡರ್‌ ಆಟಗಾರ ಜಡೇಜಾ (Jadeja) ಅವರನ್ನು ಹೊಗಳಿ ಮಾಡಿದ ಟ್ವೀಟ್‌ (Tweet) ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಶನಿವಾರ ನಡೆದ ಪಂದ್ಯದಲ್ಲಿ ಜಡೇಜಾ ಮುಂಬೈ (Mumbai Indians) ತಂಡದ ಬ್ಯಾಟ್ಸ್‌ಮನ್‌ ಕ್ಯಾಮರೂನ್‌ ಗ್ರೀನ್‌ ಅವರನ್ನು ಕ್ಯಾಚ್‌ ಹಿಡಿದು ಔಟ್‌ ಮಾಡಿದ್ದರು.

ಜಡೇಜಾ ಎಸೆದ ಇನ್ನಿಂಗ್ಸ್‌ನ 9ನೇ ಓವರ್‌ನ ಎರಡನೇ ಎಸೆತವನ್ನು ಬಲವಾಗಿ ಬೌಲರ್‌ ತಲೆಯ ಮೇಲೆ ಬೌಂಡರಿ ಹೊಡೆಯಲು ಗ್ರೀನ್‌ ಯತ್ನಿಸಿದರು.  ಈ ಚೆಂಡಿನಿಂದ ತಪ್ಪಿಸಿಕೊಳ್ಳಲು ಅಂಪೈರ್‌ ಕೆಳಗಡೆ ಬಾಗಿದ್ದರು. ಆದರೆ ಚೆಂಡನ್ನು ಜಡೇಜಾ ಒಂದೇ ಕೈಯಲ್ಲಿ ಹಿಡಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಇದನ್ನೂ ಓದಿ: IPL 2023: ವೇಗದ ಅರ್ಧಶತಕ ಸಿಡಿಸಿ ಧೂಳೆಬ್ಬಿಸಿದ ರಹಾನೆ

ತಮ್ಮದೇ ಬೌಲಿಂಗ್‌ನಲ್ಲಿ ಅಸಾಧ್ಯವಾದ ಕ್ಯಾಚ್‌ ಅನ್ನು ಜಡೇಜಾ ಹಿಡಿದ ಬೆನ್ನಲ್ಲೇ ಧೋನಿ ಹಳೇಯ ಟ್ವೀಟ್‌ ವೈರಲ್‌ ಆಗಿದೆ.

“ಸರ್‌ ಜಡೇಜಾ ಕ್ಯಾಚ್ ತೆಗೆದುಕೊಳ್ಳಲು ಓಡುವುದಿಲ್ಲ. ಆದರೆ ಚೆಂಡು ಅವರನ್ನೇ ಹುಡುಕುತ್ತದೆ ಮತ್ತು ಅವರ ಕೈಗೆ ಬೀಳುತ್ತದೆ” ಎಂದು ಧೋನಿ 2013ರ ಏಪ್ರಿಲ್‌ 9 ರಂದು ಟ್ವೀಟ್‌ ಮಾಡಿದ್ದರು.

ಮೊದಲು ಬ್ಯಾಟ್‌ ಮಾಡಿದ ಮುಂಬೈ 8 ವಿಕೆಟ್‌ ನಷ್ಟಕ್ಕೆ 157ರನ್‌ ಗಳಿಸಿತ್ತು. ಚೆನ್ನೈ ಅಜಿಂಕ್ಯಾ ರೆಹಾನೆ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 18.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 159 ರನ್‌ ಹೊಡೆದು 7 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಜಡೇಜಾ 20 ರನ್‌ ನೀಡಿ 3 ವಿಕೆಟ್‌ ಪಡೆದಿದ್ದರು.

Share This Article