ಮುಂಬೈ: ಮುಂದಿನ ತಿಂಗಳ ಮೊದಲ ವಾರದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ನಡುವೆ ಆರಂಭವಾಗಲಿರುವ ಆ್ಯಷಸ್ ಸೀರಿಸ್‍ನಲ್ಲಿ ಕ್ರಿಕೆಟ್ ಆಟಗಾರರು ಮೊದಲ ಬಾರಿಗೆ ನಂಬರ್ ಹಾಗೂ ತಮ್ಮ ಹೆಸರು ಇರುವ ಬಿಳಿ ಜೆರ್ಸಿಗಳನ್ನು ಧರಿಸಿ ಕಣಕ್ಕೆ ಇಳಿಯಲಿದ್ದಾರೆ. ಟೆಸ್ಟ್ ಕ್ರಿಕೆಟನ್ನು ಮತ್ತಷ್ಟು ಆಸಕ್ತಿಕರವಾಗಿ ಮಾಡಲು ಐಸಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದರೊಂದಿಗೆ ಭಾರತ ಹಾಗೂ ವೆಸ್ಟ್ ಇಂಡೀಸ್ ಟೂರ್ನಿಯಲ್ಲೂ ಇತ್ತಂಡಗಳು ಇದೇ ಮಾದರಿಯಲ್ಲಿ ಕಣಕ್ಕೆ ಇಳಿಯಲಿವೆ.
ಆಗಸ್ಟ್ 22 ರಿಂದ ಟೀಂ ಇಂಡಿಯಾ – ವೆಸ್ಟ್ ಇಂಡೀಸ್ ಟೆಸ್ಟ್ ಟೂರ್ನಿ ಆರಂಭವಾಗಲಿದ್ದು, ಏಕದಿನ ಮತ್ತು ಟಿ20 ಮಾದರಿಯಲ್ಲೇ ಆದೇ ನಂಬರ್ ನೊಂದಿಗೆ ಆಟಗಾರರು ಕಣಕ್ಕೆ ಇಳಿಯಲಿದ್ದಾರೆ. ತಂಡದ ನಾಯಕರಾದ ಕೊಹ್ಲಿ 18, ರೋಹಿತ್ 45ನೇ ನಂಬರಿನ ಜೆರ್ಸಿ ಧರಿಸುವ ನಿರೀಕ್ಷೆ ಇದೆ. ಆದರೆ ಟೆಸ್ಟ್ ಕ್ರಿಕೆಟ್‍ಗೆ 2014 ರಲ್ಲಿ ಧೋನಿ ನಿವೃತ್ತಿ ಹೇಳಿರುವುದರಿಂದ ಅವರು ಧರಿಸುತ್ತಿದ್ದ ನಂ.7 ಜೆರ್ಸಿಯನ್ನು ಯಾರು ಪಡೆಯಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಇದರ ನಡುವೆಯೇ ಈ ಕುರಿತು ಸ್ಪಷ್ಟನೆ ನೀಡಿರುವ ಬಿಸಿಸಿಐ ವಕ್ತಾರರೊಬ್ಬರು ಧೋನಿ ಅವರ ನಂ. 7ರ ಜೆರ್ಸಿಯನ್ನು ಯಾರಿಗೂ ನೀಡುವುದಿಲ್ಲ ಎಂದಿದ್ದಾರೆ. ಈ ನಂಬರ್ ಗೆ ಹಾಗೂ ಧೋನಿಗೆ ಅವಿನಾಭವ ಸಂಬಂಧ ಇದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಆದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಲ್ಲದೇ ಯಾವುದೇ ನಂಬರ್ ಗೆ ಅಧಿಕೃತವಾಗಿ ನಿವೃತ್ತಿ ಹೇಳಲು ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ನಂ.10 ಜೆರ್ಸಿಯನ್ನು ಶಾದೂಲ್ ಠಾಕೂರ್ ಧರಿಸಿದ್ದ ಸಂದರ್ಭದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಣಾಮ ಈ ಏಕದಿನ ಹಾಗೂ ಟಿ20 ಮಾದರಿಯಲ್ಲಿ ನಂ.10 ನ್ನು ಯಾರಿಗೂ ನೀಡದೆ ಬಿಸಿಸಿಐ ಅನಧಿಕೃತವಾಗಿ ನಿವೃತ್ತಿ ನೀಡಿದೆ.