ಹುಟ್ಟುಹಬ್ಬದ ಸಂಭ್ರಮಕ್ಕೂ ಮುನ್ನ ಧೋನಿ ವಿಶೇಷ ಸಾಧನೆ

Public TV
2 Min Read
ms dhoni

ಲಂಡನ್: ಟೀಂ ಇಂಡಿಯಾ ಮಾಜಿ ನಾಯಕರ ಎಂಎಸ್ ಧೋನಿ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದು, ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಧೋನಿ ಶುಕ್ರವಾರ ನಡೆದ 2ನೇ ಟಿ20 ಪಂದ್ಯ ಆಡುವ ಮೂಲಕ 500 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ ಭಾರತದ 3ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಇದುವೆರೆಗೂ ಧೋನಿ 497 ಅಂತರಾಷ್ಟ್ರೀಯ ಪಂದ್ಯಗಳನ್ನು ಟೀಂ ಇಂಡಿಯಾ ಪರ ಆಡಿದ್ದು, 3 ಪಂದ್ಯದಲ್ಲಿ ಏಷ್ಯಾ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರೊಂದಿಗೆ ಧೋನಿ 500 ಪ್ಲಸ್ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್(664) , ರಾಹುಲ್ ದ್ರಾವಿಡ್ (509) ಸಹ ಸ್ಥಾನ ಪಡೆದಿದ್ದು, ಶ್ರೀಲಂಕಾ ಆಟಗಾರ ಮಹೇಲಾ ಜಯವರ್ಧನೆ (652), ಕುಮಾರ ಸಂಗಾಕ್ಕರ (594), ಜಯಸೂರ್ಯ (586), ರಿಕಿ ಪಾಟಿಂಗ್ (560), ಶಾಹೀದ್ ಆಫ್ರಿದಿ (524) ಮತ್ತು ಜಾಕ್ ಕಾಲೀಸ್ (519) ಸ್ಥಾನ ಪಡೆದಿದ್ದಾರೆ.

ಧೋನಿ 90 ಟೆಸ್ಟ್ ಪಂದ್ಯ, 318 ಏಕದಿನ ಪಂದ್ಯ ಹಾಗೂ 92 ಟಿ20 ಪಂದ್ಯಗಳನ್ನು ಆಡಿದ್ದಾರೆ. 2014 ರಲ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಅವರು 4,876 ರನ್ ಗಳಿಸಿದ್ದು, ಏಕದಿನ ಮಾದರಿಯಲ್ಲಿ 9,967 ರನ್ ಹಾಗೂ ಟಿ20 ಯಲ್ಲಿ 1,487 ರನ್ ಗಳಿಸಿದ್ದಾರೆ. ವಿಶೇಷವಾಗಿ ಧೋನಿ ಐಸಿಸಿ ಏರ್ಪಡಿಸಿರುವ ಮೂರು ಮಾದರಿಯ ಪ್ರತಿಷ್ಠಿತ ಕಪ್ ಗಳನ್ನು ಗೆದ್ದ ಏಕೈಕ ನಾಯಕರಾಗಿದ್ದಾರೆ. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2007ರ ಟಿ20 ವಿಶ್ವಕಪ್, 2011 ರ ಏಕದಿನ ವಿಶ್ವಕಪ್ ಹಾಗೂ 2013 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಬೀಗಿದೆ.

ಇನ್ನು ಎಂಎಸ್ ಧೋನಿ ತಮ್ಮ 37 ನೇ ಹುಟ್ಟುಹಬ್ಬದ ಸಂಭ್ರಮವನ್ನು ಪತ್ನಿ ಸಾಕ್ಷಿ ಹಾಗೂ ಪುತ್ರಿ ಜೀವಾ ಸೇರಿದಂತೆ ಟೀಂ ಇಂಡಿಯಾ ಕೆಲ ಆಟಗಾರರೊಂದಿಗೆ ಆಚರಣೆ ಮಾಡಿಕೊಂಡಿದ್ದು, ಹಲವು ಸ್ಟಾರ್ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಧೋನಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಪ್ರಮುಖವಾಗಿ ಟೀಂ ಇಂಡಿಯಾ ಮಾಜಿ ಆಟಗಾರರ ವಿರೇಂದ್ರ ಸೆಹ್ವಾಗ್ ತಮ್ಮ ಟ್ವೀಟ್ ನಲ್ಲಿ ಧೋನಿ ಫೋಟೋ ಟ್ವೀಟ್ ಮಾಡಿ ಶುಭಕೋರಿದ್ದು ಎಲ್ಲರ ಗಮನ ಸೆಳೆದಿದೆ.

 

Share This Article
Leave a Comment

Leave a Reply

Your email address will not be published. Required fields are marked *