ನವದೆಹಲಿ: ವಿಶ್ವಕಪ್ ನಂತರ ಧೋನಿ ಕ್ರಿಕೆಟಿಗೆ ನಿವೃತ್ತಿ ಹೇಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ವಿಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾದಲ್ಲಿ ಭಾಗಿಯಾಗದ ಕಾರಣ ನಿವೃತ್ತಿ ಹೇಳುತ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಈಗ ಧೋನಿ ತನ್ನ ಆಸೆಯನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಕಾಶ್ಮೀರದಲ್ಲಿ ಸೇನಾ ತರಬೇತಿಗೆ ಹೋಗುತ್ತಿದ್ದಾರೆ. ಧೋನಿ ಅವರು ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡವನ್ನು ಸೇರಿ ಕರ್ತವ್ಯ ನಿರ್ವಹಿಸಲು ಇಚ್ಛಿಸಿದ್ದರು. ಅದರಂತೆಯೇ ಧೋನಿ ಅವರು ಪ್ಯಾರಾಚೂಟ್ ರೆಜಿಮೆಂಟ್ ಬೆಟಾಲಿಯನ್ ಅನ್ನು ಸೇರಿಕೊಂಡು ತರಬೇತಿಯಲ್ಲಿ ಭಾಗವಹಿಸಲು ಅನುಮತಿ ಕೇಳಿದ್ದರು. ಇದೀಗ ಧೋನಿ ಅವರ ಮನವಿಯನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪುರಸ್ಕರಿಸಿ ಆರ್ಮಿ ಬೆಟಾಲಿಯನ್ ತರಬೇತಿ ಪಡೆಯಲು ಧೋನಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
Advertisement
Advertisement
ಧೋನಿ ಅವರು ಮುಂದಿನ ಎರಡು ತಿಂಗಳವರೆಗೂ ಪ್ಯಾರಾಚೂಟ್ ರೆಜಿಮೆಂಟ್ ಬೆಟಾಲಿಯನ್ ಜೊತೆ ಜಮ್ಮು ಮತ್ತು ಕಾಶ್ಮೀರದಲ್ಲಿ ತರಬೇತಿ ಪಡೆಯಲಿದ್ದಾರೆ. ಆದರೆ ಧೋನಿ ಅವರು ಯಾವುದೇ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ.
Advertisement
ಕರ್ನಲ್ ಗೌರವ ಹುದ್ದೆ
ಧೋನಿ ಅವರಿಗೆ 2011ರಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ನೀಡಲಾಗಿತ್ತು. ಈ ಕರ್ನಲ್ ಗೌರವ ಹುದ್ದೆ ಟೆರಿಟೋರಿಯಲ್ ಆರ್ಮಿಯ 106ನೇ ಇನ್‍ಫ್ಯಾಂಟ್ರಿ ಬೆಟಾಲಿಯನ್‍ಗೆ ಸೇರಿದ್ದಾಗಿತ್ತು. ಭಾರತೀಯ ಸೇನೆ ಹೊಂದಿರುವ ಎರಡು ಪ್ಯಾರಾಚೂಟ್ ರೆಜಿಮೆಂಟ್‍ಗಳು ಪೈಕಿ ಇನ್‍ಫ್ಯಾಂಟ್ರಿ ಬೆಟಾಲಿಯನ್ ಒಂದಾಗಿದೆ. ವಿಶೇಷವೆಂದರೆ ಈ ಹಿಂದೆ ಅಂದರೆ 2015ರಲ್ಲಿ ಕೂಡ ಧೋನಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದವರೊಂದಿಗೆ ತರಬೇತಿ ಪಡೆದುಕೊಂಡಿದ್ದರು.
Advertisement
ವಿಶ್ವಕಪ್ ಕ್ರಿಕೆಟ್ ವೇಳೆ ಧೋನಿ ಕೀಪಿಂಗ್ ವೇಳೆ ಪ್ಯಾರಾಚೂಟ್ ರೆಜಿಮೆಂಟ್ ಬಲಿದಾನ್ ಬ್ಯಾಡ್ಜ್ ಧರಿಸಿ ಗೌರವ ಸೂಚಿಸಿದ್ದರು. ಭಾರತದವರು ಈ ಬ್ಯಾಡ್ಜ್ ಧರಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದರು. ಆದರೆ ಐಸಿಸಿ ಬಿಸಿಸಿಐಗೆ ಸೂಚನೆಯ ಹಿನ್ನೆಲೆಯಲ್ಲಿ ಧೋನಿ ನಂತರದ ಪಂದ್ಯಗಳಲ್ಲಿ ಬಲಿದಾನ್ ಬ್ಯಾಡ್ಜ್ ಇರುವ ಗ್ಲೌಸ್ ಧರಿಸಿರಲಿಲ್ಲ.
ಧೋನಿ ಅವರು, ತಾವೂ ಎರಡು ತಿಂಗಳ ಕಾಲ ಕ್ರಿಕೆಟ್ ಪಂದ್ಯಗಳ ಆಯ್ಕೆಗೆ ಲಭ್ಯವಿರುವುದಿಲ್ಲ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ತಿಳಿಸಿದ್ದಾರೆ. ವಿಶ್ವಕಪ್ ಪ್ರಾರಂಭವಾಗುವ ಮೊದಲೇ ಧೋನಿ ಸೇನಾ ತರಬೇತಿಗೆ ಹೋಗಬೇಕೆಂದು ತೀರ್ಮಾನಿಸಿದ್ದರು. ಆದರೆ ಕೆಲ ಸರಣಿ, ಐಪಿಎಲ್ ಪಂದ್ಯಗಳಿಂದಾಗಿ ಧೋನಿ ತರಬೇತಿ ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಕ್ರಿಕೆಟಿಗೆ 2 ತಿಂಗಳು ವಿರಾಮ ಘೋಷಿಸಿ ಧೋನಿ ಸೇನಾ ತರಬೇತಿ ಪಡೆಯಲು ತೆರಳುತ್ತಿದ್ದಾರೆ.
ಆಗಸ್ಟ್ 3 ರಿಂದ ಹೋಗುವ ಭಾರತದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಧೋನಿ ಅವರನ್ನು ಆಯ್ಕೆ ಮಾಡಿಲ್ಲ. ಎಂಎಸ್‍ಕೆ ಪ್ರಸಾದ್ ನೇತೃತ್ವದ ಹಿರಿಯ ಆಯ್ಕೆ ಸಮಿತಿ ಏಕದಿನ, ಟಿ20ಐ ಮತ್ತು ಟೆಸ್ಟ್ ತಂಡಗಳನ್ನು ಆಯ್ಕೆ ಮಾಡಲು ಭಾನುವಾರ ಮುಂಬೈನಲ್ಲಿ ಸಭೆ ಸೇರಿತ್ತು.
ಅಲ್ಲಿ ಎಂಎಸ್ ಧೋನಿ ಸೀಮಿತ ಓವರ್ ಗಳ ಸರಣಿಗೆ ಲಭ್ಯವಿರುವುದಿಲ್ಲ. ಅವರು ಕೂಡ ತಾವು ಇರುವುದಿಲ್ಲ ಎಂದು ತಿಳಿಸಿದ್ದಾರೆ. ವಿಶ್ವಕಪ್ ನಂತರ ನಾವು ಕೆಲವು ಯೋಜನೆಗಳನ್ನು ಹಾಕಿದ್ದೇವೆ. ಜೊತೆಗೆ ರಿಷಬ್ ಪಂತ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಯೋಚಿಸಿದ್ದೇವೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ತಿಳಿಸಿದ್ದರು.
ನಾವು ಧೋನಿ ಅವರೊಂದಿಗೆ ಭವಿಷ್ಯದ ಚರ್ಚಿಸಿದ್ದೇವೆ. ನಿವೃತ್ತಿ ಅವರ ವೈಯಕ್ತಿಕವಾದ ವಿಚಾರವಾಗಿದೆ. ಧೋನಿಯಂತಹ ಮಹಾನ್ ಕ್ರಿಕೆಟಿಗರಿಗೆ ಯಾವಾಗ ನಿವೃತ್ತಿ ಹೊಂದಬೇಕೆಂದು ತಿಳಿದಿದೆ ಎಂದು ಅವರು ಹೇಳಿದರು.