ಜಾರ್ಖಂಡ್ ವಿಧಾನಸಭಾ ಚುನಾವಣೆ ರಾಯಭಾರಿಯಾಗಿ ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ ನೇಮಕ

Public TV
2 Min Read
MS Dhoni

ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆ (Jharkhand Assembly Election) ರಾಯಭಾರಿಯಾಗಿ (Brand Ambassador) ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯವರನ್ನು (Mahendra Singh Dhoni) ಚುನಾವಣಾ ಆಯೋಗ (Election Commission) ಆಯ್ಕೆ ಮಾಡಿದೆ.

ನ.13 ಹಾಗೂ ನ.20ರಂದು ಎರಡು ಹಂತಗಳಲ್ಲಿ ನಡೆಯಲಿರುವ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ.ಇದನ್ನೂ ಓದಿ: ರಸ್ತೆ ದಾಟುವಾಗ ಬೈಕ್ ಡಿಕ್ಕಿ – ಚಿಕಿತ್ಸೆ ಫಲಕಾರಿಯಾಗದೇ ಉಪತಹಶೀಲ್ದಾರ್ ಸಾವು

ಜಾರ್ಖಂಡ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಾರ್ಖಂಡ್‌ ಮುಖ್ಯ ಚುನಾವಣಾಧಿಕಾರಿ ಕೆ.ರವಿಕುಮಾರ್ ಮಾತನಾಡಿ, ವಿಧಾನಸಭಾ ಚುನಾವಣೆಗೆ ಧೋನಿ ತಮ್ಮ ಫೋಟೋವನ್ನು ಬಳಸಲು ಚುನಾವಣಾ ಆಯೋಗಕ್ಕೆ ಒಪ್ಪಿಗೆ ನೀಡಿದ್ದಾರೆ. ಜೊತೆಗೆ ಇನ್ಯಾವುದೇ ವಿವರ ಬೇಕಾದಲ್ಲಿ ಅವರ ಒಪ್ಪಿಗೆಯ ಮೇರೆಗೆ ತೆಗೆದುಕೊಳ್ಳಲಾಗುವುದು. SWEEP (ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಶನ್ ಮತ್ತು ಎಲೆಕ್ಟೋರಲ್ ಪಾರ್ಟಿಸಿಪೇಷನ್) ಕಾರ್ಯಕ್ರಮದ ಅಡಿಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಧೋನಿ ಭಾಗಿಯಾಗಲಿದ್ದಾರೆ. ವಿಶೇಷವಾಗಿ ಮತದಾರರಲ್ಲಿ ಮತ ಚಲಾಯಿಸುವಂತೆ ಪ್ರೋತ್ಸಾಹಿಸುತ್ತಾರೆ ಎಂದು ಚುನಾವಣಾ ಆಯೋಗ ಆಶಿಸುತ್ತದೆ ಎಂದರು.

ನ.13 ರಂದು ಮೊದಲ ಹಂತದಲ್ಲಿ ಒಟ್ಟು 43 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈಗಾಗಲೇ ಶುಕ್ರವಾರ (ಅ.25ರಂದು) ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದೆ. ನಾಮಪತ್ರ ಸಲ್ಲಿಸಿದವರ ಪೈಕಿ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಸರೈಕೆಲಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (AJSU) ಪಕ್ಷದ ಅಧ್ಯಕ್ಷ ಮತ್ತು ಜಾರ್ಖಂಡ್‌ನ ಮಾಜಿ ಉಪಮುಖ್ಯಮಂತ್ರಿ ಸುದೇಶ್ ಮಹತೋ ಅವರು ಸಿಲ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಎಜೆಎಸ್‌ಯು, ಜನತಾ ದಳ (United) ಮತ್ತು ಲೋಕ ಜನಶಕ್ತಿ ಪಕ್ಷ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿದೆ. ಬಿಜೆಪಿ 68, ಎಜೆಎಸ್‌ಯು 10, ಜೆಡಿಯು 2 ಮತ್ತು ಎಲ್‌ಜೆಪಿ 1 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

ಒಟ್ಟು 81 ಸ್ಥಾನಗಳಿಗೆ ನ.13 ಮತ್ತು ನ.20 ರಂದು ಎರಡು ಹಂತಗಳಲ್ಲಿ ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ನ.23 ರಂದು ಫಲಿತಾಂಶ ಪ್ರಕಟಿಸಲಿದೆ.ಇದನ್ನೂ ಓದಿ: ಜೆಇಇ ಪರೀಕ್ಷೆ ಪಾಸಾಗದ್ದಕ್ಕೆ 7ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ – ಡೆತ್‌ನೋಟ್‌ನಲ್ಲಿ ಏನಿತ್ತು?

Share This Article