Sunday, 22nd July 2018

Recent News

ಮೂರು ವರ್ಷದ ಬಳಿಕ ಟ್ವೀಟ್ ಲೈಕಿಸಿದ ಧೋನಿ: ಆ ಟ್ವೀಟ್ ನಲ್ಲಿ ಏನಿದೆ?

ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ, ಹಾಲಿ ವಿಕೆಟ್ ಕೀಪರ್ ಎಂಎಸ್ ಧೋನಿ ಮೂರು ವರ್ಷದ ಬಳಿಕ ಟ್ವೀಟ್ ಒಂದನ್ನು ಲೈಕ್ ಮಾಡಿದ್ದಾರೆ.

ಹೌದು. ಧೋನಿ 2009ಕ್ಕೆ ಟ್ವಿಟ್ಟರ್ ನಲ್ಲಿ ಖಾತೆ ತೆರೆದಿದ್ದರೆ ಅಲ್ಲಿಂದ ಇಲ್ಲಿಯವರೆಗೆ ಕೇವಲ ಮೂರು ಟ್ವೀಟ್ ಗಳನ್ನು ಮಾತ್ರ ಲೈಕ್ ಮಾಡಿದ್ದಾರೆ. 2014ರ ಡಿಸೆಂಬರ್ ನಲ್ಲಿ ಹೈದರಾಬಾದ್ ಮತ್ತು ಸರ್ವಿಸಸ್ ಪಂದ್ಯದ ವೇಳೆ ಬಿಸಿಸಿಐ ಟ್ವೀಟ್ ಲೈಕ್ ಮಾಡಿದ ಬಳಿಕ ಧೋನಿ ಇದೂವರೆಗೂ ಯಾವೊಂದು ಟ್ವೀಟ್ ಲೈಕ್ ಮಾಡಿರಲಿಲ್ಲ. ಆದರೆ ಈಗ ಇನ್‍ಖಬರ್ ಹಿಂದಿ ವಾಹಿನಿಯ ಟ್ವೀಟ್ ಲೈಕ್ ಮಾಡಿದ್ದಾರೆ. ಇದನ್ನೂ ಓದಿ: 100 ಮೀಟರ್ ಓಡಿದ್ರು ಧೋನಿ, ಪಾಂಡ್ಯ: ವಿನ್ನರ್ ಯಾರು ಗೊತ್ತಾ?

ಆ ಟ್ವೀಟ್ ನಲ್ಲಿ ಏನಿದೆ?
2019ರ ವಿಶ್ವಕಪ್ ಕ್ರಿಕೆಟ್ ಟ್ರೋಫಿಯನ್ನು ಟೀಂ ಇಂಡಿಯಾ ಗೆಲ್ಲಲಿದೆ ಎನ್ನುವ ಸುದ್ದಿ ಈ ಟ್ವೀಟ್ ನಲ್ಲಿದೆ. ಮದುವೆ ಬಳಿಕ ನಡೆದ ಮೊದಲ ವಿಶ್ವಕಪ್ ಅನ್ನು 1983ರಲ್ಲಿ ಕಪಿಲ್ ದೇವ್ ಮತ್ತು 2011ರಲ್ಲಿ ಧೋನಿ ಗೆದ್ದುಕೊಂಡಿದ್ದರು. ಅದೇ ರೀತಿ ವಿರಾಟ್ ಕೊಹ್ಲಿ ಸಹ 2019ರಲ್ಲಿ ವಿಶ್ವಕಪ್ ಗೆಲ್ಲಲಿದ್ದಾರೆ ಎಂದು ಹೇಳಿದೆ.

ಸುದ್ದಿಯಲ್ಲಿ ಅನುಷ್ಕಾ ಶರ್ಮಾ ಅವರನ್ನು ಕೈ ಹಿಡಿದ ಬಳಿಕ ಕೊಹ್ಲಿಯ ಅದೃಷ್ಟ ಖುಲಾಯಿಸುವ ಜೊತೆಗೆ 2019ರ ವಿಶ್ವಕಪ್ ಗೆಲ್ಲಲಿದ್ದಾರೆ ಎಂದು ಬರೆಯಲಾಗಿದೆ.

ಈ ಟ್ವೀಟನ್ನು ಧೋನಿ ಜೊತೆಗೆ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ, ಬಿಸಿಸಿಐ, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಮೊಹಮ್ಮದ್ ಅಜರುದ್ದೀನ್, ರಾಜೀವ್ ಶುಕ್ಲಾ, ಅನುರಾಗ್ ಠಾಕೂರ್, ಶರಾದ್ ಪವರ್, ಗೌತಮ್ ಗಂಭೀರ್ ಮತ್ತು ಅಜಯ್ ಜಡೇಜಾ ಅವರಿಗೆ ಟ್ಯಾಗ್ ಮಾಡಲಾಗಿದೆ.

2009ರಲ್ಲಿ ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟ ಧೋನಿ ಒಟ್ಟು ಇದೂವರೆಗೆ 445 ಟ್ವೀಟ್ ಮಾಡಿದ್ದಾರೆ. 34 ಮಂದಿಯನ್ನು ಫಾಲೋ ಮಾಡುತ್ತಿರುವ ಧೋನಿಯನ್ನು ಒಟ್ಟು 67.97 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ಅವರು 2013ರ ಮಾರ್ಚ್ ನಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದ ಟ್ವೀಟ್ ಒಂದನ್ನು ಮೊದಲ ಬಾರಿಗೆ ಧೋನಿ ಲೈಕ್ ಮಾಡಿದ್ದರು. ಇದನ್ನೂ ಓದಿ: ವಿರಾಟ್, ಧೋನಿ ನಡುವೆ ಹೊಂದಾಣಿಕೆ ಎಷ್ಟಿದೆ? ಕೊಹ್ಲಿಯ ಮಾತು ಕೇಳಿದ್ರೆ ನಿಮ್ಗೆ ಇಷ್ಟವಾಗುತ್ತೆ

 

Leave a Reply

Your email address will not be published. Required fields are marked *