ರಾಯಚೂರು: ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಆರೋಗ್ಯ ಸುಧಾರಣೆಗಾಗಿ ರಾಯಚೂರಿನಲ್ಲಿ ಭಕ್ತರು ನಿರಂತರ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.
ಶ್ರೀಗಳು ಪುನಃ ಧರ್ಮ ಕಾರ್ಯದಲ್ಲಿ ಸಕ್ರಿಯರಾಗಲು ಆಶೀರ್ವದಿಸುವಂತೆ ಪ್ರಾಣ ದೇವರಿಗೆ ವಿಶೇಷ ಅಭಿಷೇಕ, ಮೃತ್ಯುಂಜಯ ಹಾಗೂ ಧನ್ವಂತರಿ ಹೋಮ ಮಾಡಿ ಪ್ರಾರ್ಥಿಸಲಾಯಿತು.
ನಗರದ ಗಾಜಗಾರಪೇಟೆಯ ಪ್ರಾಣದೇವರ ದೇವಸ್ಥಾನದಲ್ಲಿ ವಿಶ್ವ ಮಧ್ವ ಪರಿಷತ್ ನ ಸದಸ್ಯರು ಉತ್ತರಾಧಿಮಠದ ಸತ್ಯಾತ್ಮ ತೀರ್ಥ ಶ್ರೀಗಳ ಕರೆಯ ಮೆರೆಗೆ ಪೂಜೆ, ಹೋಮ-ಹವನ ಕಾರ್ಯಗಳನ್ನು ನೆರವೇರಿಸಿ, ಪ್ರಾರ್ಥಿಸುತ್ತಿದ್ದಾರೆ. ಶುಕ್ರವಾರದಿಂದ ಮಂತ್ರಾಲಯ ಮಠ, ಕೋಟೆ ರಾಯರ ಮಠ ಸೇರಿದಂತೆ ವಿವಿಧೆಡೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳಿಗೂ ರಾಯಚೂರಿಗೂ ಅವಿನಾಭಾವ ಸಂಬಂಧವಿದ್ದು ಜಿಲ್ಲೆಯಲ್ಲಿ ಸಾವಿರಾರು ಭಕ್ತರನ್ನು ಹೊಂದಿದ್ದಾರೆ. ಪರ್ಯಾಯ ಪೂರ್ವದಲ್ಲಿ ಜಿಲ್ಲೆಯಲ್ಲಿ ಸಂಚಾರ ನಡೆಸಿ ವಿಶೇಷ ಪೂಜೆಗಳನ್ನು ನಡೆಸುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.