-ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಬೇಡ
ಉಡುಪಿ: ಮೈಸೂರು ಚಾಮುಂಡಿ ಬೆಟ್ಟ ಧಾರ್ಮಿಕ ಕ್ಷೇತ್ರ, ಅದು ಚಾಮುಂಡೇಶ್ವರಿ ತಾಯಿಯ ಆಸ್ತಿ. ನಾವು ಆ ತಾಯಿಯನ್ನು ಮಹಿಷಾಸುರಮರ್ದಿನಿ ಎಂದು ನಂಬುತ್ತೇವೆ. ಈ ಭಾವನೆಗೆ ಧಕ್ಕೆ ಆಗದಂತೆ ಮಹಿಷ ದಸರಾ ಆಚರಣೆ ಮಾಡಬಹುದು. ಆದರೆ ಚಾಮುಂಡಿಬೆಟ್ಟದ ಮೇಲೆ ಮಹಿಷ ದಸರಾ (Mahisha Dasara) ಸರಿಯಲ್ಲ ಎಂದು ಸಂಸದ ಯದುವೀರ್ ಒಡೆಯರ್ (Yaduveer Wodeyar) ಹೇಳಿದ್ದಾರೆ.
ನಗರದಲ್ಲಿ (Udupi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಷ ದಸರಾ ವಿಚಾರವಾಗಿ ಪ್ರತಿಕ್ರಿಸಿಸಿದರು. ಈ ವೇಳೆ, ಸಂವಿಧಾನದಲ್ಲಿ ಯಾವುದೇ ನಂಬಿಕೆಗಳನ್ನು ಇಟ್ಟುಕೊಳ್ಳಲು ಅವಕಾಶವಿದೆ. ಮನೆಯಲ್ಲಿ ಯಾವುದೇ ಆಚರಣೆ ಮಾಡಬಹುದು. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲೂ ಸರ್ಕಾರದಿಂದ ಅನುಮತಿ ಪಡೆದು ಮಾಡಿಕೊಳ್ಳಬಹುದು. ನಿಯಮ ಅನುಸರಿಸಿ ಆಚರಣೆ ಮಾಡಿದರೆ ನಮಗೂ ಸಂತೋಷ ಎಂದರು.
ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದ ವಿಚಾರವಾಗಿ, ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣದ ಬಗ್ಗೆ ಬಹಳಷ್ಟು ಚರ್ಚೆ ನಡೆದಿದೆ. ಈಗಾಗಲೇ ಎಫ್‍ಐಆರ್ ಕೂಡ ದಾಖಲಾಗಿದೆ. ಮುಖ್ಯಮಂತ್ರಿಗಳು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ರಾಜೀನಾಮೆ ಕೊಟ್ಟು ತನಿಖೆಯನ್ನು ಎದುರಿಸಲಿ. ತನಿಖೆಯಲ್ಲಿ ಏನು ವರದಿ ಬರುತ್ತದೆ ಎಂಬುದನ್ನು ನೋಡಿ ಮುಂದುವರೆಯಲಿ ಎಂದಿದ್ದಾರೆ.
ಮಹಿಷ ಮಂಡಲೋತ್ಸವ ವರ್ಸಸ್ ಚಾಮುಂಡಿ ಚಲೋ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಚಾಮುಂಡಿ ತಾಯಿ ದರ್ಶನಕ್ಕೆ ಯಾರಿಗೂ ಇವತ್ತು ಅವಕಾಶ ಇಲ್ಲ. ಹೀಗಾಗಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.