ಬೆಂಗಳೂರು: ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂತವರು ಈ ಕಾರ್ಯಕ್ರಮಕ್ಕೆ ಸೇರಿಲ್ಲ ಎಂದು ಹೇಳುವ ಮೂಲಕ ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಟೌನ್ ಹಾಲ್ ಮುಂಭಾಗ ನಡೆದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಟೀಕೆ ಮಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಜಾಗೃತಿ ಸಭೆಗೆ ಸೇರಿದವರೆಲ್ಲರೂ ಐಟಿ ಕಂಪನಿಗಳ ಉದ್ಯೋಗಿಗಳು, ವೈದ್ಯರು, ವಕೀಲರು, ಆಟೋ ಚಾಲಕರು ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಹಾಗೂ ದೇಶದ ಆರ್ಥಿಕತೆಗೆ ತಮ್ಮದೇಯಾದ ಕೊಡುಗೆ ನೀಡುತ್ತಿರುವ ವಿದ್ಯಾವಂತರು. ನಮ್ಮ ಪ್ರತಿಭಟನೆಯಲ್ಲಿ ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ ಅನಕ್ಷರಸ್ಥರು, ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂತಹವರು ಯಾರೂ ಸೇರಿಲ್ಲ ಎಂದು ಕಿಡಿ ಕಾರಿದ್ದಾರೆ.
ಬೆಂಗಳೂರು ಪ್ರಪಂಚದಲ್ಲೇ ಪ್ರಸಿದ್ಧಿ ಪಡೆದಿರುವ ನಗರ, ಇಂತಹ ನಗರದಲ್ಲಿ ಹಿಂಸಾಚಾರ ನಡೆಸಿದ್ದಾರೆ. ಆದರೆ ಇಂದು ನಾವು ಶಾಂತಿಯುತವಾಗಿ ಹೋರಾಟ ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಹಿಂಸಾತ್ಮಕವಾಗಿ ಪ್ರತಿಭಟನೆ ಮಾಡಿದವರಿಗೆ ಅವರು ಯಾಕೆ ಪ್ರತಿಭಟನೆ ಮಾಡುತ್ತಿದ್ದರು ಎಂಬುದೇ ತಿಳಿದಿರಲಿಲ್ಲ. ಕೆಲವರು ಜಿಎಸ್‍ಟಿ ವಿರೋಧಿಸಿ, ಇನ್ನೂ ಕೆಲವು ಈರುಳ್ಳಿ, ಬೆಳ್ಳುಳ್ಳಿ ಬೆಲೆ ಹೆಚ್ಚಾಗಿದೆ ಹೀಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದಿದ್ದರು ಎಂದು ತಿಳಿಸಿದರು.
ಅವರಲ್ಲಿ ಬಹುತೇಕರಿಗೆ ಈ ಕಾನೂನಿನ ಉದ್ದೇಶವೇನು, ಇದರ ಉಪಯೋಗವೇನು, ಇದನ್ನು ಯಾಕೆ ಜಾರಿಗೆ ತಂದಿದ್ದಾರೆ, ಇದಾವುದನ್ನೂ ಪ್ರತಿಭಟನಾಕಾರರಿಗೆ ತಿಳಿದಿರಲಿಲ್ಲ. ನಿಮ್ಮನ್ನು ಪಾಕಿಸ್ತಾನಕ್ಕೆ ಓಡಿಸಿ ಬಿಡುತ್ತಾರಂತೆ ಎಂದು ಸುಳ್ಳು ಹೇಳಿ ಕರೆ ತಂದಿದ್ದಾರೆ. ಈ ಮೂಲಕ ಇಡೀ ದೇಶಕ್ಕೆ ಬೆಂಕಿ ಹಚ್ಚುವಂತಹ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಏನೂ ತಿಳಿಯದ ಮುಸ್ಲಿಂ ಯುವಕರಿಗೆ ತಪ್ಪು ಮಾಹಿತಿ ನೀಡಿ ಹಿಂಸಾಚಾರಕ್ಕೆ ತಳ್ಳಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಮಂಗಳೂರಿನಲ್ಲಿ ಇಬ್ಬರ ಸಾವಿಗೆ ಮಾಜಿ ಸಚಿವ ಯುಟಿ ಖಾದರೇ ಕಾರಣ. ಯುವಕರ ಜೀವನದ ಜೊತೆ ಚೆಲ್ಲಾಟವಾಡಬೇಡಿ, ಹೊರದೇಶದಿಂದ ಭಾರತಕ್ಕೆ ವಲಸೆ ಬರುವ ಮುಸ್ಲಿಮರನ್ನು ರಾಷ್ಟ್ರದೊಳಗೆ ಬಿಟ್ಟುಕೊಳ್ಳುವುದಿಲ್ಲ ಎಂದರೆ ಇವರಿಗೇನು ಸಮಸ್ಯೆ? ಪಾಕಿಸ್ತಾನದ ಇಮ್ರಾನ್ ಖಾನ್, ಕಾಂಗ್ರೆಸ್ ನ ರಾಹುಲ್ ಗಾಂಧಿ ಒಂದೇ ಭಾಷಣ ಮಾಡುತ್ತಾರೆ. ಈ ಕಾನೂನು, ಭಾರತೀಯ ಹಿಂದೂಗಳು, ಹಿಂದೂ ಮುಸ್ಲಿಮರನ್ನು ಒಂದೇ ರೀತಿಯಾಗಿ ನೋಡುತ್ತದೆ. ನಮ್ಮ ದೇಶ ಭಾರತ, ಮನಸ್ಸೋ ಇಚ್ಚೆ ಇರುವ ಧರ್ಮಕ್ಷೇತ್ರ ಭಾರತವಲ್ಲ ಎಂದು ಕಿಡಿಕಾರಿದರು.
ಅಲ್ಲದೆ ಕಾಂಗ್ರೆಸ್ಸಿನವರದ್ದು, ಉಸರವಳ್ಳಿ ಮಾತುಗಳು. ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನದ ಮುಸ್ಲಿಮೇತರರಿಗೆ ಪೌರತ್ವ ನೀಡುವುದು ತಪ್ಪು ಎಂದಾದರೆ, ಈ ಹಿಂದೆ ಇವರೇ ಹುಡುಕಿ ವೋಟರ್ ಐಡಿ, ಆಧಾರ್ ಮಾಡಿಕೊಟ್ಟಿದ್ದಾರಲ್ಲ. ಇದು ಸೆಕ್ಯೂಲರಾ ಹಾಗಾದರೆ ಎಂದು ಪ್ರಶ್ನಿಸಿದರು.