– ಏಪ್ರಿಲ್ 3ಕ್ಕೆ ಸಭೆ – ಮಂಡ್ಯದಲ್ಲೇ ನಿರ್ಧಾರ ಪ್ರಕಟಿಸುತ್ತೇನೆ ಎಂದ ಸಂಸದೆ
ಬೆಂಗಳೂರು: ಮಂಡ್ಯದ ಜನತೆ ನನ್ನ ಶಕ್ತಿ, ಆವತ್ತಿಗೂ ನನ್ನ ಪರ ಇದ್ದರು, ಇವತ್ತಿಗೂ ಇದ್ದಾರೆ. ನಾನು ಇದ್ದರೂ-ಬಿದ್ದರೂ, ಗೆದ್ದರೂ-ಸೋತರೂ ಮಂಡ್ಯ ಬಿಡಲ್ಲ. ಮಂಡ್ಯದಲ್ಲೇ ನನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ (Sumalatha Ambareesh) ಹೇಳಿದ್ದಾರೆ.
ಬೆಂಗಳೂರಿನ (Bengaluru) ಜೆ.ಪಿ ನಗರದಲ್ಲಿರುವ ʻಅಂಬಿ ನಿವಾಸʼದಲ್ಲಿ ಬೆಂಬಲಿಗರ ಸಭೆ ನಡೆಸಿ ಅವರಿಂದು ಮಾತನಾಡಿದರು. ಸಭೆಯಲ್ಲಿ 500ಕ್ಕೂ ಹೆಚ್ಚು ಬೆಂಬಲಿಗರು ಪಾಲ್ಗೊಂಡಿದ್ದರು. ಇದೇ ವೇಳೆ ಮಂಡ್ಯದಿಂದ ಸುಮಲತಾ ಅವರ ಸ್ಪರ್ಧೆಗೆ ಒತ್ತಾಯಿಸಿದರು. ಬಳಿಕ ಬೆಂಬಲಿಗರ ಸಭೆಯನ್ನುದ್ದೇಶಿಸಿ ಮಾತನಾಡಿದ ಸುಮಲತಾ, ಮಂಡ್ಯದ (Mandya) ಘನತೆ ಪಾರ್ಲಿಮೆಂಟ್ ನಲ್ಲೂ ಎತ್ತಿ ಹಿಡಿದಿದ್ದೇನೆ. ಯಾರೂ ಬೊಟ್ಟುಮಾಡಿ ತೋರಿಸುವ ಕೆಲಸ ಮಾಡಿಲ್ಲ. ಇದ್ದರೂ-ಬಿದ್ದರೂ, ಗೆದ್ದರೂ-ಸೋತರೂ ಮಂಡ್ಯ ಬಿಡಲ್ಲ. ಮಂಡ್ಯ ಅಂದ್ರೆ ನಮಗೆ ಭಾವನೆ, ಪ್ರೀತಿ, ಅಭಿಮಾನ ಎಲ್ಲವೂ ಎಂದು ಭಾವುಕರಾಗಿದ್ದಾರೆ.
Advertisement
Advertisement
ಇವತ್ತಿಗೂ ನನ್ನ ಪರ ಜನ ಇದ್ದಾರೆ:
ಈ ಐದು ವರ್ಷ ರಾಜಕೀಯ ಜೀವನ ಪ್ರಾರಂಭವಾಗಿದ್ದೇ ನಿಮ್ಮ ಪ್ರೀತಿಯಿಂದ, ಇವತ್ತೂ ಅದೇ ಪ್ರೀತಿಯಿಂದ ಇಲ್ಲಿ ಸೇರಿದ್ದೀರಿ. ಅಂಬರೀಷ್ ಅವರ ರಾಜಕೀಯ ಜೀವನದ ಆರಂಭವಾದ ಮೊದಲ ದಿನದಿಂದ ಈವರೆಗೆ ನನ್ನನ್ನು ಬೆಂಬಲಿಸಿರುವ ನಾಯಕರು ಇಲ್ಲಿದ್ದಾರೆ. ನಮ್ಮ ನೋವನ್ನೂ ಹಂಚಿಕೊಂಡಿದ್ದಾರೆ. ನನಗೆ ರಾಜಕೀಯ ಅನುಭವ ಇಲ್ಲದ ಸಂದರ್ಭದಲ್ಲೂ ಎಲ್ಲರೂ ಜೊತೆಗಿದ್ದರು. ಮಂಡ್ಯದ ಜನರೇ ನನ್ನ ಶಕ್ತಿ, ಆವತ್ತು ಯಾವ ದೊಡ್ಡ ರಾಜಕಾರಣಿಗಳೂ ನನ್ನ ಪರ ಇರಲಿಲ್ಲ. ಇವತ್ತೂ ಜನರೇ ನನ್ನಪರ ಇರೋದು ಎಂದು ನುಡಿದಿದ್ದಾರೆ.
Advertisement
Advertisement
ನುಡಿದಂತೆ ನಡೆದಿದ್ದೇನೆ:
5 ವರ್ಷ ಕಷ್ಟ ಅನುಭವಿಸಿದ ಬಗ್ಗೆ ನೋವಾಗಿರಬಹುದು, ಕಷ್ಟ ಆಗಿರಬಹುದು, ಕಣ್ಣೀರು ಹಾಕಿರಬಹುದು. ನಾನು ನನ್ನ ಸ್ವಾರ್ಥ ನೋಡಿ ತಿರ್ಮಾನ ಮಾಡಿಕೊಳ್ಳಬಹುದಿತ್ತು. ನಾನು, ನನ್ನ ಮಗ, ನಮ್ಮ ರಾಜಕೀಯ ಅಂತ ಯೋಚನೆ ಮಾಡಿದ್ದಿದ್ರೆ ಎಲ್ಲೋ ಇರ್ತಿದ್ದೆ. ಆ ಯೋಚನೆ ಒಂದು ದಿನವೂ ನಾನು ಮಾಡಿಲ್ಲ. ಆವತ್ತಿಂದಲೂ ಇವತ್ತಿನ ವರೆಗೂ ಏನೇ ಮಾತಾಡಿದ್ರೂ ನುಡಿದಂತೆ ನಡೆದಿದ್ದೇನೆ. ಎಲ್ಲೂ ತಪ್ಪು ಹೆಜ್ಜೆ ಹಾಕಿಲ್ಲ ಎಂದು ಹೇಳಿದ್ದಾರೆ.
ನನಗೆ ಯಾವುದೇ ಸ್ವಾರ್ಥವಿಲ್ಲ. ಮಂಡ್ಯ ಬಿಟ್ಟು ಬೇರೇನೂ ಬೇಡ, ಇವತ್ತು ರಾಜಕೀಯ ಸ್ಥಿತಿ ಬದಲಾಗಿದೆ. ಮಂಡ್ಯದಲ್ಲಿ ಯಾವುದೂ ಸುಲಭವಾಗಿಲ್ಲ. ಕಳೆದ ಚುನಾವಣೆಗಿಂತಲೂ ಹೆಚ್ಚಿನ ಸವಾಲು ಇದೆ. ನಿಮ್ಮನ್ನ ನೋಯಿಸುವ ಯಾವುದೇ ನಿರ್ಧಾರ ನಾನು ತಗೊಳ್ಳಲ್ಲ. ಮಂಡ್ಯದ ಋಣ, ಗುಣ ಎಂದಿಗೂ ಬಿಡಲ್ಲ ಎಂದಿದ್ದಾರೆ.
ಏಪ್ರಿಲ್ 3ಕ್ಕೆ ಸಭೆ: ಇದೇ ಏಪ್ರಿಲ್ 3ಕ್ಕೆ ಮತ್ತೆ ಮಂಡ್ಯಕ್ಕೆ ಬರುತ್ತೇನೆ. ಮಂಡ್ಯದಲ್ಲೇ ಆಪ್ತರ ಜೊತೆ ಸಭೆ ಮಾಡುತ್ತೇನೆ. ಎಲ್ಲವನ್ನೂ ಸಮಗ್ರವಾಗಿ ಚರ್ಚಿಸಿ ಮಂಡ್ಯದಲ್ಲೇ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದು ಹೇಳಿದ್ದಾರೆ.