ಬೆಂಗಳೂರು: ಮಂಡ್ಯದಲ್ಲಿ ಹೊಸ ಮೈಶುಗರ್ ಕಾರ್ಖಾನೆ ನಿರ್ಮಾಣ ಮಾಡಲು ಹೊರಟಿರುವುದಕ್ಕೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿರುವ ಸಂಸದೆ, ಹೊಸ ಸಕ್ಕರೆ ಕಾರ್ಖಾನೆ ಬದಲು, ಮೈ ಶುಗರ್ ಫ್ಯಾಕ್ಟರಿಯನ್ನೇ (My Sugar Factory) ಮತ್ತಷ್ಟು ಬಲಪಡಿಸಲಿ ಎಂದು ಆಗ್ರಹಿಸಿದ್ದಾರೆ.
ಪೋಸ್ಟ್‌ನಲ್ಲೇನಿದೆ..?: ಮಂಡ್ಯದ ಅಸ್ಮಿತೆ, ರೈತರ ಒಡನಾಡಿಯಾಗಿರುವ ಮೈ ಶುಗರ್ ಫ್ಯಾಕ್ಟರಿಗೆ ಮರುಜೀವ ಕೊಡುವುದಕ್ಕಾಗಿ ನಾನು ಮಾಡಿದ ಹೋರಾಟ ತಮಗೆಲ್ಲ ಗೊತ್ತಿದೆ. ಆ ಫ್ಯಾಕ್ಟರಿಗೆ ಮತ್ತಷ್ಟು ಶಕ್ತಿ ತುಂಬುವ ಬದಲು, ಹೊಸ ಕಾರ್ಖಾನೆ ಹಾಗೂ ಅದೇ ಆವರಣದಲ್ಲಿ ಐಟಿ ಹಬ್ ಮಾಡಲು ಕರ್ನಾಟಕ ಸರಕಾರ ಹೊರಟಿರುವುದಕ್ಕೆ ನನ್ನ ವಿರೋಧವಿದೆ.
ಅಗತ್ಯ ಬಿದ್ದರೆ ಮೈ ಶುಗರ್ ಫ್ಯಾಕ್ಟರಿಯ ಆಸ್ತಿಯನ್ನು ಮಾರಾಟಕ್ಕೆ ಇಡುತ್ತೇವೆ ಎನ್ನುವ ಸರಕಾರದ ನಿಲುವಿಗೆ ನನ್ನ ತೀವ್ರ ವಿರೋಧವಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಕ್ಕೆ ಸಾಧ್ಯವಿಲ್ಲ. ಜೊತೆಗೆ ಐಟಿ ಹಬ್ ಅನ್ನು ಬೇರೆ ಯಾವುದಾದರೂ ಸ್ಥಳದಲ್ಲಿ ಮಾಡಿ, ಮೈ ಶುಗರ್ ಆವರಣದಲ್ಲಿ ಮಾಡುವುದಕ್ಕೆ ನಾನಂತೂ ಬಿಡುವುದಿಲ್ಲ. ಇದನ್ನೂ ಓದಿ: ಶಿವರಾತ್ರಿ ಮೆರವಣಿಗೆ ವೇಳೆ ವಿದ್ಯುತ್ ಶಾಕ್ – 14 ಮಕ್ಕಳು ಆಸ್ಪತ್ರೆಗೆ ದಾಖಲು
ಈವರೆಗೂ ಮೈ ಶುಗರ್ ಫ್ಯಾಕ್ಟರಿಗೆ ಬಂದಿರುವ ಹಣ ಏನಾಯಿತು ಎನ್ನುವುದಕ್ಕೆ ಉತ್ತರವೇ ಇಲ್ಲ. ಆದರೂ, ಹೊಸ ಕಾರ್ಖಾನೆ ಪ್ರಾರಂಭ ಮಾಡುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಹೊಸ ಸಕ್ಕರೆ ಕಾರ್ಖಾನೆ ಬದಲು, ಮೈ ಶುಗರ್ ಫ್ಯಾಕ್ಟರಿಯನ್ನೇ ಮತ್ತಷ್ಟು ಬಲಪಡಿಸಲಿ ಎಂದು ಸಂಸದೆ ಆಗ್ರಹಿಸಿದ್ದಾರೆ.