ಮಂಡ್ಯ: 10 ಮೀಟರ್ ಹಿಂದೆ ನಿಂತಿದ್ದ ರೈಲನ್ನು ತಾನಿದ್ದ ಜಾಗಕ್ಕೆ ಸಂಸದೆ ಸುಮಲತಾ ಅಂಬರೀಶ್ ಕರೆಸಿಕೊಂಡು ವಿಶೇಷ ಬೋಗಿಯನ್ನು ಉದ್ಘಾಟಿಸಿದ್ದಾರೆ.
ಮಂಡ್ಯ ರೈಲು ನಿಲ್ದಾಣದಲ್ಲಿ ಮೆಮೋ ರೈಲಿನ ಮಹಿಳಾ ವಿಶೇಷ ಬೋಗಿಯನ್ನು ಉದ್ಘಾಟಿಸುವ ವೇಳೆ ಸಂಸದೆ ಸುಮಲತಾ ಅವರು ರೈಲನ್ನು ತಾವಿದ್ದಲ್ಲಿಯೇ ಕರೆಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಉದ್ಘಾಟನೆ ಮಾಡಲು ಸಿದ್ಧಗೊಂಡಿದ್ದ ರೈಲು 10 ಮೀ. ಹಿಂದೆ ನಿಂತಿತ್ತು. 10 ಹೆಜ್ಜೆ ನಡೆಯಲು ಸಂಸದೆ ಸುಮಲತಾ ಯೋಚಿಸಿದ್ದಕ್ಕಾಗಿ ಅಧಿಕಾರಿಗಳೇ ರೈಲನ್ನು ಮುಂದಕ್ಕೆ ಕರೆಸಿದ್ದಾರೆ. ರೈಲು ತಾನಿದ್ದ ಸ್ಥಳಕ್ಕೆ ಬಂದ ನಂತರ ಸುಮಲತಾ ಮೆಮೋ ರೈಲಿನ ವಿಶೇಷ ಬೋಗಿಯ ಟೇಪ್ ಕತ್ತರಿಸಿ ಒಳ ಪ್ರವೇಶಿಸಿದರು.
ಕೇಂದ್ರ ರೈಲ್ವೆ ಸಚಿವರ ಬಳಿ ಮೆಮೋ ರೈಲಿನಲ್ಲಿ ವಿಶೇಷ ಮಹಿಳಾ ಬೋಗಿಗಾಗಿ ಸಂಸದೆ ಸುಮಲತಾ ಮನವಿ ಮಾಡಿದ್ದರು. ಮನವಿ ಮೇರೆಗೆ ರೈಲ್ವೇ ಸಚಿವಾಲಯ ಮೆಮೋ ರೈಲಿನಲ್ಲಿ ಮಹಿಳಾ ವಿಶೇಷ ಬೋಗಿ ಮಂಜೂರು ಮಾಡಿತ್ತು. ಈ ಮೂಲಕ ಮಂಡ್ಯ ಮಹಿಳೆಯರಿಗೆ ಸುಮಲತಾ ದೀಪಾವಳಿ ಗಿಫ್ಟ್ ನೀಡಿದ್ದಾರೆ.
ಈ ಮೆಮೋ ರೈಲು ಬೆಂಗಳೂರು- ಮೈಸೂರು ಮಾರ್ಗವಾಗಿ ಸಂಚರಿಸುತ್ತದೆ. ರೈಲಿನಲ್ಲಿ ಮಹಿಳಾ ಬೋಗಿಯನ್ನು ಅಳವಡಿಸಲಾಗಿರಲಿಲ್ಲ. ಇದಕ್ಕಾಗಿ ಸುಮಲತಾ ಅವರು ಕೇಂದ್ರ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಈ ಬೋಗಿಯಲ್ಲಿ 80 ಆಸನಗಳಿದ್ದು, ಪ್ರತ್ಯೇಕ ಮಹಿಳಾ ಬೋಗಿ ಅಳವಡಿಕೆಯಿಂದ ನಿತ್ಯ ಬೆಂಗಳೂರಿಗೆ ತೆರಳುವ ಮಹಿಳಾ ಕಾರ್ಮಿಕರಿಗೆ ಅನುಕೂಲವಾಗಿಲಿದೆ.
ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಪ್ರತ್ಯೇಕ ಮಹಿಳಾ ಬೋಗಿಗೆ ಈ ಭಾಗದ ಮಹಿಳೆಯರು ನನ್ನಲ್ಲಿ ಮನವಿ ಸಲ್ಲಿಸಿದ್ದರು. ಚುನಾವಣೆ ಸಮಯದಲ್ಲಿ ಕೆಲಸ ನಿರತ ಮಹಿಳೆಯರು ಮನವಿ ಮಾಡಿದ್ದರು. ಜನರ ಕೋರಿಕೆಯಂತೆ ಕೇಂದ್ರ ರೈಲ್ವೇ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ. ಇದೀಗ ಮಹಿಳಾ ಬೋಗಿಯನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.