– ಕಾಂಗ್ರೆಸ್‍ಗೆ ಇಲ್ಲ, ಬಿಜೆಪಿಗೂ ಸುಮಲತಾ ಹೋಗಲ್ಲ
ಬೆಂಗಳೂರು: ತನ್ನನ್ನು ಗೆಲ್ಲಿಸಿದ್ದ ಮಂಡ್ಯ ಜನತೆಗೆ ಸುಮಲತಾ ಅವರು ಯಾರೂ ನಿರೀಕ್ಷೆ ಮಾಡದಂತಹ ಮೆಗಾ ಪ್ಲಾನ್ ಒಂದನ್ನ ಸಿದ್ಧಪಡಿಸುತ್ತಿದ್ದಾರೆ. ಇವರ ಮೆಗಾ ಪ್ಲಾನ್‍ಗೆ ಜೊತೆಯಾಗಿ ಹೆಜ್ಜೆ ಹಾಕೋಕೆ ಜೋಡೆತ್ತುಗಳು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಎದುರಾಳಿಗಳು ಬೆಚ್ಚಿ ಬೀಳುವಂತಹ ಮೆಗಾ ಶೋ ಮಂಡ್ಯದಲ್ಲಿ ನಡೆಯಲಿದೆ.
ಹೌದು. ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಸಂಸದರಾಗಿರುವ ಸುಮಲತಾ ಎನ್ ಡಿಎ ಅಥವಾ ಯುಪಿಎ ಎರಡು ಮೈತ್ರಿಕೂಟವನ್ನೂ ಸೇರದೆ ಪಕ್ಷೇತರರಾಗಿ ಪ್ರತ್ಯೇಕ ಅಸ್ತಿತ್ವವನ್ನ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂಬುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.
Advertisement
Advertisement
ಅಧಿಕಾರದಲ್ಲಿರುವ ಬಿಜೆಪಿ ಜೊತೆ ಗುರುತಿಸಿಕೊಂಡರೆ ಕಾವೇರಿಯಂತಹ ಸೂಕ್ಷ್ಮವಾದ ವಿಚಾರಗಳಲ್ಲಿ ಬೆಳವಣಿಗೆ ಆದರೆ ಆಗ ಧ್ವನಿ ಎತ್ತಿ ಮಾತನಾಡೋಕೆ ಆಗಲ್ಲ. ಇತ್ತ ಕಾಂಗ್ರೆಸ್ ಜೊತೆ ಗುರುತಿಸಿಕೊಂಡರೆ ಬೇರೆ ಬೇರೆ ಯೋಜನೆಗಳು ಹಾಗೂ ಅನುದಾನದ ವಿಷಯದಲ್ಲಿ ಸಮಸ್ಯೆ ಆಗಲಿದೆ. ಆದ್ದರಿಂದ ಪಕ್ಷೇತರರಾಗಿ ಗೆದ್ದವರು ಪಕ್ಷೇತರರಾಗಿಯೇ ಎರಡೂ ಬಣದಿಂದ ಅಂತರ ಕಾಯ್ದುಕೊಳ್ಳಲು ತೀರ್ಮಾನಿಸಿದ್ದಾರೆ.
Advertisement
ಮಂಡ್ಯ ಅಭಿವೃದ್ಧಿ ದೃಷ್ಟಿಯಿಂದ ಇಂತಹ ತೀರ್ಮಾನಕ್ಕೆ ಬಂದ ಸುಮಲತಾ ಅವರು, ತಮ್ಮನ್ನು ಗೆಲ್ಲಿಸಿದ್ದ ಮಂಡ್ಯ ಜನರಿಗೆ ಕೃತಜ್ಞತೆ ಸಲ್ಲಿಸಲು ಮೆಗಾ ಶೋ ನಡೆಸಲು ತೀರ್ಮಾನಿಸಿದ್ದಾರೆ. ಮಂಡ್ಯ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೊಂದರಂತೆ ಒಟ್ಟು 8 ಕೃತಜ್ಞತೆ ಸಲ್ಲಿಕೆ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
Advertisement
ಎಲ್ಲಾ ಎಂಟು ಸಮಾವೇಶಗಳಲ್ಲು ಜೋಡೆತ್ತುಗಳಾದ ದರ್ಶನ್ ಹಾಗೂ ಯಶ್ ಭಾಗವಹಿಸಲಿದ್ದಾರೆ. ಮತಯಾಚನೆ ಸಂದರ್ಭದಲ್ಲಿ ಸುಮಲತಾ ಸರಿ ಸುಮಾರು 200 ಹಳ್ಳಿಗಳಲ್ಲಿ ಮತಯಾಚನೆ ಮಾಡಿ ರೋಡ್ ಶೋ ನಡೆಸಿದ್ದರು. ಆ ಎಲ್ಲಾ ಹಳ್ಳಿಗಳಲ್ಲೂ ಮತ್ತೆ ರೋಡ್ ಶೋ ನಡೆಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಹೀಗೆ ತಮಗೆ ಭರ್ಜರಿ ಗೆಲುವಿನ ಗಿಫ್ಟ್ ನೀಡಿದ ಮಂಡ್ಯ ಜನರ ಮನೆ ಬಾಗಿಲಿಗೆ ಮತ ಕೇಳಲು ಹೋದ ರೀತಿಯಲ್ಲೇ ಕೃತಜ್ಞತೆ ಸಲ್ಲಿಸಲು ಹೋಗಲು ತೀರ್ಮಾನಿಸಿದ್ದಾರೆ. ಆ ಮೂಲಕ ಮಂಡ್ಯ ಜನರ ಮನಸ್ಸಲ್ಲಿ ಶಾಶ್ವತ ಸ್ಥಾನ ಪಡೆಯುವ ಮೆಗಾ ಪ್ಲಾನ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಒಟ್ಟಿನಲ್ಲಿ ಒಂದೆಡೆ ದೆಹಲಿಯಲ್ಲೂ ತಟಸ್ಥ ನಿಲುವು, ಇನ್ನೊಂದೆಡೆ ಕ್ಷೇತ್ರದಲ್ಲಿ ಮನೆ ಬಾಗಿಲಿಗೆ ಹೋಗಿ ಕೃತಜ್ಞತೆ ಸಲ್ಲಿಸುವ ಮೂಲಕ ರಾಜಕೀಯ ಎದುರಾಳಿಗಳಿಗೂ ಖಡಕ್ ಸಂದೇಶ ರವಾನಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.