Connect with us

Districts

ಮಂಡ್ಯ ರೈಲು ಚಾಲನೆ ವಿಚಾರದಲ್ಲಿ ಯಾವುದೇ ತಪ್ಪಾಗಿಲ್ಲ – ಸ್ಪಷ್ಟನೆ ನೀಡಿದ ಸುಮಲತಾ

Published

on

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ಗುರುವಾರ ಮಂಡ್ಯದ ರೈಲಿನಲ್ಲಿ ಮಹಿಳೆಯರಿಗಾಗಿ ಇದ್ದ ವಿಶೇಷ ಬೋಗಿಗಳಿಗೆ ಚಾಲನೆ ನೀಡುವಾಗ, ರೈಲನ್ನು ತಾವಿದ್ದ ಜಾಗಕ್ಕೆ ಕರೆಸಿಕೊಂಡಿದ್ದಾರೆ ಎಂದು ಆರೋಪಿಸಿ ಭಾರೀ ಚರ್ಚೆನಡೆದಿತ್ತು. ಈ ಬಗ್ಗೆ ಇಂದು ಸುಮಲತಾ ಅವರು ಪ್ರತಿಕ್ರಿಯಿಸಿ ಈ ಕಾರ್ಯಕ್ರಮದಲ್ಲಿ ಯಾವುದೇ ತಪ್ಪಾಗಿಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ನನ್ನ ಬಗ್ಗೆ ವಿರೋಧ ಸುದ್ದಿಗಳು ಬರಬಾರದು ಎಂದು ನಾನು ಹೇಳೋದಿಲ್ಲ. ಆದರೆ ನಾನು ತಪ್ಪು ಮಾಡಿದ್ದನ್ನು ವಿರೋಧಿಸಿ ಬೇಸರವಿಲ್ಲ. ಆದರೆ ಗುರುವಾರ ಮಂಡ್ಯ ರೈಲು ಚಾಲನೆ ವಿಚಾರವಾಗಿ ಪ್ರಸಾರವಾದ ಸುದ್ದಿಯಿಂದ ನನಗೆ ಬೇಸರವಾಗಿದೆ ಎಂದು ತಿಳಿಸಿದರು.

ನಿನ್ನೆ ನಾನು ರೈಲಿನ ಮಹಿಳಾ ಬೋಗಿಗಳಿಗೆ ಚಾಲನೆ ನೀಡುವಾಗ, ನಾನು ನಿಂತ ಸ್ಥಳದಲ್ಲೆ ಚಾಲನೆ ನೀಡಬೇಕು ಎಂದು ನಿಗದಿಯಾಗಿತ್ತು. ಅಧಿಕಾರಿಗಳು ಕೂಡ ರೈಲು ಇಲ್ಲಿಗೆ ಬಂದಾಗಲೇ ಚಾಲನೆ ನೀಡಬೇಕೆಂದು ತಿಳಿಸಿದ್ದರು. ಆ ಪ್ರಕಾರ ನಾನು ಆ ಸ್ಥಳದಲ್ಲಿಯೇ ನಿಂತಿದ್ದೆ. ರೈಲು ಅಲ್ಲಿಗೆ ಬಂದಮೇಲೆ ಚಾಲನೆ ಕೊಟ್ಟೆ ಎಂದು ಸ್ಪಷ್ಟಪಡಿಸಿದರು.

ನಿಲ್ದಾಣಕ್ಕೆ ಆಗ ತಾನೇ ರೈಲು ಬಂದು ಸ್ವಲ್ಪ ದೂರ ನಿಂತಿತ್ತು. ರೈಲಿನಲ್ಲಿ ಇರುವ ಪ್ರಯಾಣಿಕರು ಇಳಿಯುವಾಗ ನೂಕುನುಗ್ಗಲು ಆಗಬಾರದು ಎಂದು ರೈಲಿನ ಲೊಕೋ ಪೈಲಟ್ ನಾವು ನಿಂತಿದ್ದ ಸ್ಥಳದಿಂದ ಸುಮಾರು 10 ಹೆಜ್ಜೆ ದೂರದಲ್ಲಿ ರೈಲು ನಿಲ್ಲಿಸಿದ್ದರು. ಆದರೆ ಕೊನೆ ಬೋಗಿಗಳಲ್ಲಿ ಇದ್ದ ಜನರು ಇಳಿಯುವ ಸ್ಥಳದಲ್ಲಿ ಪ್ಲಾಟ್‍ಫಾರ್ಮ್ ಇಲ್ಲದಿದ್ದ ಕಾರಣ, ಅಧಿಕಾರಿಗಳು ರೈಲನ್ನು ಮುಂದೆ ತರುವಂತೆ ಸೂಚಿಸಿದ್ದಕ್ಕೆ ರೈಲನ್ನು ಸ್ವಲ್ಪ ಮುಂದೆ ತರಲಾಯಿತು. ಆಗ ನಿಗದಿಯಾದ ಸ್ಥಳಕ್ಕೆ ರೈಲು ಬಂದಮೇಲೆ ನಾನು ಬೋಗಿಗಳಿಗೆ ಚಾಲನೆ ನೀಡಿದೆ ಅಷ್ಟೇ. ಇಲ್ಲಿ ಯಾವುದೇ ರೀತಿಯ ತಪ್ಪಾಗಿಲ್ಲ ಎಂದು ನಡೆದ ವಿಚಾರವನ್ನು ತಿಳಿಸಿದರು.

ಗುರುವಾರ ಮಂಡ್ಯದ ರೈಲು ನಿಲ್ದಾಣದಲ್ಲಿ ಮೆಮೋ ರೈಲಿನ ಮಹಿಳಾ ವಿಶೇಷ ಬೋಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡಿದ್ದ ಅವರು, ಮೆಮು ರೈಲಿಗೆ ಅಳವಡಿಸಿದ ಮಹಿಳಾ ಮೀಸಲು ಬೋಗಿಗಳಿಗೆ ಚಾಲನೆ ನೀಡಿದ್ದು ತುಂಬಾ ಖುಷಿಯಾಗಿದೆ. ಇದು ಹೆಮ್ಮೆಯ ವಿಷಯ ನಾನು ಚುನಾವಣೆ ಸಮಯದಲ್ಲಿ ಪ್ರಚಾರ ಮಾಡುವ ವೇಳೆ ಜಿಲ್ಲೆಯ ಮಹಿಳೆಯರು ವಿಶೇಷ ಮಹಿಳಾ ಮೀಸಲು ಬೋಗಿಗಾಗಿ ಮನವಿ ಮಾಡಿದ್ದರು ಎಂದು ತಿಳಿಸಿದ್ದರು.

ನಾನು ಈ ವಿಚಾರವಾಗಿ ರೈಲ್ವೆ ಸಚಿವರಾದ ಪಿಯುಷ್ ಗೋಯಲ್ ಹಾಗೂ ಸುರೇಶ್ ಅಂಗಡಿ ಅವರಲ್ಲಿ ಮನವಿ ಮಾಡಿದ್ದೆ. ನನ್ನ ಮನವಿಯಂತೆ ಮೆಮೋ ರೈಲಿಗೆ ಎರಡು ಬೋಗಿಗಳನ್ನು ಅಳವಡಿಸಲು ಅವಕಾಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದರೆ ಹೆಚ್ಚಿನ ಬೋಗಿ ಅಳವಡಿಸಲಾಗುವುದು ಎಂದು ಹೇಳಿದರು.

ಈ ಮೆಮೋ ರೈಲು ಬೆಂಗಳೂರು- ಮೈಸೂರು ಮಾರ್ಗವಾಗಿ ಸಂಚರಿಸುತ್ತದೆ. ರೈಲಿನಲ್ಲಿ ಮಹಿಳಾ ಬೋಗಿಯನ್ನು ಅಳವಡಿಸಲಾಗಿರಲಿಲ್ಲ. ಇದಕ್ಕಾಗಿ ಸುಮಲತಾ ಅವರು ಕೇಂದ್ರ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಈ ಬೋಗಿಯಲ್ಲಿ 80 ಆಸನಗಳಿದ್ದು, ಪ್ರತ್ಯೇಕ ಮಹಿಳಾ ಬೋಗಿ ಅಳವಡಿಕೆಯಿಂದ ನಿತ್ಯ ಬೆಂಗಳೂರಿಗೆ ತೆರಳುವ ಮಹಿಳಾ ಕಾರ್ಮಿಕರಿಗೆ ಅನುಕೂಲವಾಗಿಲಿದೆ.

Click to comment

Leave a Reply

Your email address will not be published. Required fields are marked *