– ಹಿಂದೂ ಧರ್ಮ ಸಮರ್ಥನೆ ಮಾಡಿಕೊಳ್ಳುವ ಮೊದಲಿಗರಾಗಿದ್ದರು
– ಎಲ್ಲವನ್ನೂ ನೇರವಾಗಿ ಹೇಳುತ್ತಿದ್ದರು
ಮೈಸೂರು: ಪೇಜಾವರ ಶ್ರೀಗಳ ನಿಧನಕ್ಕೆ ಮೈಸೂರಿನಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಜಾವರ ಶ್ರೀಗಳು ಕಟ್ಟಾ ಹಿಂದೂವಾದಿಗಳಾಗಿದ್ದರು. ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಹೆಚ್ಚಾಗಿತ್ತು. ಅಸ್ಪೃಶ್ಯತೆ ನಿವಾರಣೆ ವಿಚಾರವಾಗಿ ನಮಗೂ ಅವರಿಗೂ ಸೈದ್ಧಾಂತಿಕ ವಿರೋಧ ಇತ್ತು. ಗೋ ಹತ್ಯೆ ನಿಷೇಧ, ರಾಮಜನ್ಮ ಭೂಮಿ ವಿಚಾರದಲ್ಲಿ ಪೇಜಾವರ ಶ್ರೀ ಆಂದೋಲನ ಮಾಡಿದವರು ಎಂದು ಸ್ಮರಿಸಿದರು.
Advertisement
ಅಸ್ಪೃಶ್ಯತೆ ವಿಚಾರವಾಗಿ ರಾಷ್ಟ್ರವ್ಯಾಪಿ ಚಳುವಳಿ ಆಗಬೇಕು. ಎಲ್ಲಾ ಮಠಾಧೀಪತಿಗಳು ಒಂದು ದಿನ ಉಪವಾಸ ಮಾಡಬೇಕೆನ್ನುವುದು ನನ್ನ ಆಗ್ರಹವಾಗಿತ್ತು. ಆದರೆ ಅದಕ್ಕೆ ಸ್ವಾಮೀಜಿ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಆದರೂ ವ್ಯಕ್ತಿಗತವಾಗಿ ನಮ್ಮಿಬ್ಬರ ಬಾಂಧವ್ಯ ಚೆನ್ನಾಗಿತ್ತು. ಹಿಂದೂ ಧರ್ಮ ಗಂಗಾನದಿಯ ಹಾಗೆ. ಮೂಲದಲ್ಲಿ ಶುದ್ಧವಾಗಿದೆ, ಹರಿಯುವ ವೇಳೆ ಜನ ಮಲೀನ ಮಾಡುತ್ತಾರೆಂದು ಸ್ವಾಮೀಜಿ ಹೇಳಿದ್ದರು ಎಂದು ನೆನೆದರು.
Advertisement
Advertisement
ಸಾರ್ಥಕ, ಹೋರಾಟ, ಚಿಂತನೆಯ ಬದುಕು ಅವರದ್ದು. ದೇಶ ಒಬ್ಬ ಮಹಾನ್ ಚಿಂತಕನನ್ನು ಕಳೆದುಕೊಂಡಿದೆ. ರಾಷ್ಟ್ರದ ಧರ್ಮ ಸಂಸತ್ತಿನ ಕಾರ್ಯಕ್ರಮ ಆಯೋಜನೆ ಮಾಡಿದ ಕೀರ್ತಿ ಅವರದ್ದು. ಉಡುಪಿಯಲ್ಲಿ ವಿಶ್ವ ಹಿಂದೂ ಸಮ್ಮೇಳನವನ್ನು ದೊಡ್ಡ ಮಟ್ಟದಲ್ಲಿ ಮಾಡಿದ್ದರು. ಅನೇಕ ಬಾರಿ ಅವರ ಬಳಿ ನಾನು ಮಾತುಕತೆ ನಡೆಸಿದ್ದೇನೆ ಮಠಕ್ಕೆ ಹೋಗಿದ್ದೇನೆ. ಅವರೂ ನಮ್ಮ ಮನೆಗೆ ಬಂದಿದ್ದಾರೆ. ಅವರು ಹಿಂದೂ ಧರ್ಮ ಸಮರ್ಥನೆ ಮಾಡಿಕೊಳ್ಳುವ ಮೊದಲಿಗರಾಗಿದ್ದರು. ಅಯೋಧ್ಯೆಗಾಗಿ ದೊಡ್ಡ ಆಂದೋಲನ ಮಾಡಿದರು. ನಾನು ಅವರ ಬಳಿ ಮೆಚ್ಚುವ ಗುಣವೆಂದರೆ ಎಲ್ಲವನ್ನೂ ನೇರವಾಗಿ ಹೇಳುವುದು. ಹೀಗಾಗಿ ಅಂತಹ ಮಹಾನ್ ಚೇತನವನ್ನು ಕಳೆದುಕೊಂಡಿದ್ದು ಸಾಕಷ್ಟು ದುಃಖವಾಗಿದೆ ಎಂದರು.