ಮಂಗಳೂರು: ನಗರದ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಅಂತಿಮ ದಿನದಂದು ಸಂಸದೆ ಶೋಭಾ ಕರಂದ್ಲಾಜೆ ಸ್ವಯಂಸೇವಕರಾಗಿ ಕಾಣಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆಯ ಅವಸರದ ಮಧ್ಯೆ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಅವರು ಅಲ್ಲಿನ ಪಾಕಶಾಲೆಗೆ ಭೇಟಿ ನೀಡಿ ಸ್ವಯಂಸೇವಕರ ಜೊತೆ ಬೆರೆತರು. ಬಳಿಕ ತರಕಾರಿ ಹೆಚ್ಚುತ್ತಿದ್ದ ಮಹಿಳೆಯರ ಜೊತೆಗೆ ತಾವೇ ತರಕಾರಿಗಳನ್ನು ಹೆಚ್ಚಿದರು. ಕೆಲಹೊತ್ತು ಮಹಿಳೆಯರ ಜೊತೆ ಹರಟಿದ ಶೋಭಾ ಮತ್ತವರ ತಂಡವು ಬಳಿಕ ದೇವರ ದರ್ಶನ ಮಾಡಿ, ಉಪಹಾರ ಸೇವಿಸಿ ನಿರ್ಗಮಿಸಿದರು.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ನಡೆಯುತ್ತಿರುವ ಬ್ರಹ್ಮಕಲಶೋತ್ಸವಕ್ಕೆ ಇಂದು ಕೊನೆಯ ದಿನ. ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರು ಪೊಳಲಿ ಕ್ಷೇತ್ರಕ್ಕೆ ಮೊನ್ನೆ ಭೇಟಿ ನೀಡಿದ್ದರು. ಆಗ ಸಂಸದೆ ಶೋಭಾ ಅವರು ಕೂಡ ಇದ್ದರು. ಆದರೆ ಶೋಭಾ ಕರಂದ್ಲಾಜೆ ಅವರು ಇಂದು ಮತ್ತೆ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ರಾಜರಾಜೇಶ್ವರಿಯ ದರ್ಶನ ಭಾಗ್ಯ ಪಡೆದರು.
ಬ್ರಹ್ಮಕಲಶೋತ್ಸವದ ನಿಮಿತ್ತ ದಿನವೂ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಪಾಕಶಾಲೆಯಲ್ಲಿ ನಿರಂತರವಾಗಿ ಊಟ, ಉಪಹಾರ ಸಿದ್ಧಪಡಿಸುವ ಕಾರ್ಯ ಮಾಡಲಾಗುತ್ತಿದೆ. ಈ ವೇಳೆ ಸಂಸದೆ ಶೋಭಾ ಅವರು ಸ್ವಯಂಸೇವಕಿಯಾಗಿ ಕೆಲಸ ಮಾಡಿದ್ದು ಗಮನ ಸೆಳೆಯಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv