Connect with us

ಚುನಾವಣೆ ಹತ್ತಿರ ಬಂದಾಗ ಹಿಂದೂ ದೇವರು ನೆನಪಾದ್ರಾ: ರಾಹುಲ್‍ಗೆ ಶೋಭಾ ಪ್ರಶ್ನೆ

ಚುನಾವಣೆ ಹತ್ತಿರ ಬಂದಾಗ ಹಿಂದೂ ದೇವರು ನೆನಪಾದ್ರಾ: ರಾಹುಲ್‍ಗೆ ಶೋಭಾ ಪ್ರಶ್ನೆ

ಉಡುಪಿ: ಚುನಾವಣಾ ಯಾತ್ರೆಯನ್ನು ಬಳ್ಳಾರಿಯಿಂದ ಆರಂಭಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ಜೈಲಿಗೆ ಹೋದವರಲ್ವಾ ಅಂತ ಸಿಎಂ ಹೇಳಿಕೆಗಳ ವಿರುದ್ಧ ಲೇವಡಿ ಮಾಡಿದ್ದಾರೆ. ರಾಹುಲ್ ಗಾಂಧಿ ಹೊಸಪೇಟೆಯಿಂದ ಯಾತ್ರೆ ಆರಂಭಿಸಿದ್ದಾರೆ. ಶಾಸಕ ಆನಂದ್ ಸಿಂಗ್ ಜೈಲಿಗೆ ಹೋದವರು ಅಂತ ಸಿಎಂ ಸಿದ್ದರಾಮಯ್ಯನೇ ಹೇಳ್ತಾ ಇದ್ರು. ಈಗ ಇದಕ್ಕೇನು ಹೇಳುತ್ತಾರೆ? ಜೈಲಿಗೆ ಹೋದವರ ಕ್ಷೇತ್ರದಿಂದ ಪ್ರವಾಸ ಆರಂಭಿಸಿದ್ದಾರಲ್ಲ ಅಂತ ಸಂಸದೆ ಶೋಭಾ ಕರಂದ್ಲಾಜೆ ಚಾಟಿ ಬೀಸಿದರು.

ರಾಹುಲ್ ಟೆಂಪಲ್ ರನ್ ಮಾಡಲು ಹೊರಟಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ, ಸಿಎಂ ಗೆ ಕೂಡಾ ದೇವರು ಒಳ್ಳೆ ಬುದ್ಧಿ ಕೊಡಲಿ. ಕೆಟ್ಟಬುದ್ಧಿ ಸಿಎಂ ತಲೆಯಿಂದ ನಾಶ ಮಾಡಲಿ ಎಂದು ಹಾರೈಸಿದರು.

ಸಿಎಂ ಮಠ ಮಂದಿರ ವಶಪಡಿಸಿಕೊಳ್ಳುವ ಹುನ್ನಾರ ಮಾಡಿದ್ದಾರೆ. ರಾಹುಲ್ ಗಾಂಧಿಯವರೇ ಇಷ್ಟು ದಿನ ನಿಮ್ಮ ಧ್ವನಿ ಎಲ್ಲಿ ಅಡಗಿತ್ತು? ಹಿಂದೂ ಯುವಕರ ಹತ್ಯೆಯಾದಾಗ ರಾಹುಲ್ ಗಾಂಧಿ ಮಾತಾಡಿಲ್ಲ. ಚುನಾವಣೆ ಹತ್ತಿರ ಬಂದಾಗ ಹಿಂದೂಗಳ ದೇವರು ನೆನಪಾದ್ರಾ ಅಂತ ಚಾಟಿ ಬೀಸಿದರು.

ಬಿಜೆಪಿ ಕಾರ್ಯಕರ್ತ ಸಂತೋಷ್ ಬೆಂಗಳೂರಲ್ಲಿ ಕೊಲೆಯಾಗಿದ್ದರು. ಕೊಲೆಯಾದಾಗ ಪಕ್ಕದ ಮನೆಗೆ ಹೋಗಿ ಸಿಎಂ ಪಾರ್ಟಿ ಮಾಡಿದ್ದಾರೆ. ಖಾದರ್ ಮನೆಯಲ್ಲೇ ಮುಸ್ಲಿಂ ಧರ್ಮಗುರುಗಳ ಸಭೆಯಲ್ಲಿ ಸಿಎಂ ಚುನಾವಣೆ ಸಂದರ್ಭ ಬೆಂಬಲ ಕೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಪೋರೇಟರ್ ಪ್ರತಿಭಾ ಕುಳಾಯಿಗೆ ತಿರುಗೇಟು ನೀಡಿದ ಸಂಸದರು, ಸಂಘ ಪರಿವಾರ ಯಾವತ್ತೂ ದೇಶದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದೆ. ಸಂಘದ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಜನ ಪಾಠ ಕಲಿಸುತ್ತಾರೆ. ಲೋಕಸಭೆಯಲ್ಲಿ ಹಿಂದೆ 400 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಈಗ 40 ಕ್ಕೆ ಇಳಿಯಲು ಇದೇ ಕಾರಣ ಅಂತ ವಾಗ್ದಾಳಿ ನಡೆಸಿದರು.

ನಾನು ಸಂಸದೆಯಾಗಿ ಆರಾಮವಾಗಿದ್ದೇನೆ. ರಾಜ್ಯ ರಾಜಕಾರಣಕ್ಕೆ ಬರುವ ಆಲೋಚನೆ ಸದ್ಯಕ್ಕಿಲ್ಲ. ವಿದ್ಯಾರ್ಥಿಯಾಗಿ ದೆಹಲಿ ರಾಜಕಾರಣ ಕಲಿಯುತ್ತಿದ್ದೇನೆ. ಈಗ ನನಗೇನೂ ಅರ್ಜೆಂಟಿಲ್ಲ ಅಂತ ಶೋಭಾ ಕರಂದ್ಲಾಜೆ ಹೇಳಿದ್ರು.

Advertisement
Advertisement