ಕೊಪ್ಪಳ: ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅಂತವರು ಗಲಭೆಗೆ ಪ್ರಚೋದನೆ ನೀಡುವಂತಿದ್ದು, ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸ ಬೇಕು ಎಂದು ಸಂಸದ ಸಂಗಣ್ಣ ಕರಡಿ (Sanganna Karadi) ಒತ್ತಾಯಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮಮಂದಿರ ಉದ್ಘಾಟನೆಗೆ ತೆರಳುವ ಕರ ಸೇವಕರಿಂದ ಮತ್ತೊಮ್ಮೆ ಗೋಧ್ರಾ ಮಾದರಿ ಗಲಭೆ ನಡೆಯಬಹುದು ಎಂಬ ಹರಿಪ್ರಸಾದ್ ಮಾತಿಗೆ ತಿರುಗೇಟು ನೀಡಿದರು. ಹರಿಪ್ರಸಾದ್ (B.K Hariprasad) ಅವರ ಭಾವನೆ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಇಂತಹ ಹೇಳಿಕೆಗಳನ್ನು ಅಡ್ವಾನ್ಸ್ ಕೊಡುತ್ತಾರೆ ಅಂದರೆ ಇದರ ಅರ್ಥ ಏನು ಎಂದು ಪ್ರಶ್ನಿಸಿದ ಸಂಸದ ಸಂಗಣ್ಣ ಕರಡಿ, ಹೀಗೆ ಹೇಳುತ್ತಾರೆ ಎಂದರೆ ಇವರದ್ದೇ ಆಂತರಿಕ ಪ್ರಚೋದನೆ ಇರಬಹುದು. ಕೃತ್ಯ ಎಸಗಲು ಕೆಲವರಿಗೆ ಪ್ರಚೋದನೆ ನೀಡುತ್ತಿರಬಹುದು. ಕೆಲವು ಬಾರಿ ಇಂತಹ ಹೇಳಿಕೆಗಳಿಂದಲೇ ಹಲವು ಪ್ರಚೋದನೆಗೆ ಒಳಗಾಗುತ್ತಾರೆ. ಯಾರ ಮನಸ್ಸಿನಲ್ಲೂ ಇಲ್ಲದಿದ್ದರೂ ಕ್ರಿಯೇಟ್ ಆಗುತ್ತದೆ. ಇದರಿಂದ ಹರಿಪ್ರಸಾದ್ ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಗೋದ್ರಾ ದುರಂತದ ರೀತಿ ಮತ್ತೊಮ್ಮೆ ಏನಾದ್ರೂ ಆಗಬಹುದು: ಬಿ.ಕೆ.ಹರಿಪ್ರಸಾದ್
ರಾಮಮಂದಿರ (Ram Mandir Ayodhya) ಉದ್ಘಾಟನೆ ದಿನ ಸರ್ಕಾರಿ ರಜೆ ನೀಡುವ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಇಂತಹ ವಿಷಯಗಳನ್ನು ಪ್ರಧಾನಿ, ಗೃಹ ಸಚಿವರು ನಿರ್ಧಾರ ಮಾಡುತ್ತಾರೆ. ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದವರ ಬಗ್ಗೆ ಶಾಸಕ ಲಕ್ಷ್ಮಣ ಸವದಿ ಹೇಳಿಕೆ ಸರಿಯಲ್ಲ. ದಾನ ಕೊಟ್ಟಿರುವುದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರನ್ನು ಕರೆಯದಿರುವುದು ದೇವಸ್ಥಾನದ ಕಮಿಟಿಗೆ ಬಿಟ್ಟಿದ್ದು. ದಾನಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. ದಾನವನ್ನು ಕೈ ಮುಚ್ಚಿ ಕೊಡಬೇಕು. ಕೊಟ್ಟ ದಾನದ ಬಗ್ಗೆ ಹೇಳಬಾರದು ಇಷ್ಟನ್ನು ಮಾತ್ರ ಹೇಳುತ್ತೇನೆ ಎಂದರು.
ಸವದಿ ನನ್ನನ್ನು ಬಿಜೆಪಿಗೆ (BJP) ಕರೆ ತಂದವರು. ಅವರ ಬಗ್ಗೆ ನಾನು ಏನಾದರೂ ಮಾತನಾಡಿದರೆ ಸರಿ ಅನಿಸುವುದಿಲ್ಲ. ಮುಂದೆ ಈ ರೀತಿಯ ಹೇಳಿಕೆ ಕೊಡಬಾರದು ಎಂದು ವಿನಂತಿ ಮಾಡುತ್ತೇನೆ ಎಂದು ಹೇಳಿದರು.