ದಾವಣಗೆರೆ: ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಹಾಗೂ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ಸಿಎಂ ಸಿದ್ದರಾಮಯ್ಯ (Siddaramaiah) ಜಾತಿಗಣತಿ (Caste Census) ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ (M.P Renukacharya) ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಜಾತಿಗಳ ನಡುವೆ ಸಂಘರ್ಷದ ಬೆಂಕಿ ಹಚ್ಚುವ ಕೆಲಸ ಸರ್ಕಾರ ಮಾಡುತ್ತಿದೆ. ವೀರಶೈವ ಲಿಂಗಾಯತ ಹಿಂದೂ ಧರ್ಮದ ಕೆಳಗೆ ಬರುತ್ತದೆ. ಈ ಬಗ್ಗೆ ನಾಡಿನ ಪ್ರಮುಖ ಸ್ವಾಮಿಗಳು ಹಾಗೂ ಜಗದ್ಗುರುಗಳು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಲು ತಿಳಿಸಿದ್ದಾರೆ. ಉಪಜಾತಿಯನ್ನು ಬರೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ಪಕ್ಷ ಕೂಡ ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ ಕೃಷ್ಣ ಮಠಕ್ಕೆ ಸುಭದ್ರೆ ಕೊಡಲು ನಿರಾಕರಿಸಿದ ಹೊನ್ನಾಳಿ ಹಿರೇಕಲ್ಮಠ – ಸ್ಥಳದಲ್ಲಿ ಬಿಗುವಿನ ವಾತಾವರಣ
ಸಿದ್ದರಾಮಯ್ಯ 2014 ರಲ್ಲಿ ಮಾಡಿದ ತಪ್ಪನ್ನ ಈಗಲೂ ಮಾಡಲು ಮುಂದಾಗುತ್ತಿದ್ದಾರೆ. ವೋಟಿಗೋಸ್ಕರ ಓಲೈಕೆಗೋಸ್ಕರ ಈ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಜಾತಿಗಣತಿ ಮಾಡಲು ಮುಂದಾಗಿದೆ. ಸುಖಸುಮ್ಮನೆ ರಾಜ್ಯ ಸರ್ಕಾರ ಜಾತಿ ಗಣತಿ ಮಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಹೈಕಮಾಂಡ್ ಒತ್ತಡಕ್ಕೆ ಮಣಿದು ಕಾಂತರಾಜ್ ಆಯೋಗದ ವರದಿ ಕಸದ ಬುಟ್ಟಿಗೆ ಹಾಕಲಾಗಿದೆ. ಈಗ 15 ದಿನದಲ್ಲಿ ಜಾತಿಗಣತಿ ಮಾಡುವುದು ಅವೈಜ್ಞಾನಿಕ. ವೀರಶೈವ ಮಹಾಸಭಾ ಹಾಗೂ ಮಠಾಧೀಶರು ಒಂದು ನಿರ್ಣಯ ಮಾಡಲಿ. ಜಾತಿಗಣತಿ ವಿಚಾರದಲ್ಲಿ ಸಿದ್ದರಾಮಯ್ಯ ಮೊಂಡವಾದ ಬಿಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಆಣೆ ಪ್ರಮಾಣಕ್ಕಾಗಿ ದೇವಾಲಯಕ್ಕೆ ಬಂದ ಹೊನ್ನಾಳಿ ಶಾಸಕ – ಸವಾಲೆಸೆದು ಕೈಕೊಟ್ಟ ರೇಣುಕಾಚಾರ್ಯ ಆಪ್ತ