– 2028ರ ಚುನಾವಣೆ ವಿಜಯೇಂದ್ರ ನೇತೃತ್ವದಲ್ಲೇ ಎದುರಿಸ್ತೇವೆ ಎಂದ ಮಾಜಿ ಸಚಿವ
ಬೆಂಗಳೂರು: ಸೂರ್ಯ-ಚಂದ್ರ ಇರೋದು ಎಷ್ಟು ಸತ್ಯವೋ ವಿಜಯೇಂದ್ರ (BY Vijayendra) ರಾಜ್ಯಾಧ್ಯಕ್ಷರಾಗಿ ಮುಂದುವರಿಯೋದು ಅಷ್ಟೇ ಸತ್ಯ ಅಂತ ಮಾಜಿ ಸಚಿವ ರೇಣುಕಾಚಾರ್ಯ (MP Renukacharya) ಬಿಜೆಪಿ ರೆಬಲ್ ಟೀಂಗೆ ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿ ರೆಬಲ್ ಟೀಂ (BJP Rebel Team) ದೆಹಲಿ ಪ್ರವಾಸಕ್ಕೆ ಹೋಗಿರೋ ವಿಚಾರಕ್ಕೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಯಾವುದೇ ಬಣ ಇಲ್ಲ. ಕೇಂದ್ರದಲ್ಲಿ ಮೋದಿ ನೇತೃತ್ವದ ಉತ್ತಮವಾಗಿ ಸರ್ಕಾರ ನಡೆಯುತ್ತಿದೆ. ವಿಜಯೇಂದ್ರ ಅಧ್ಯಕ್ಷರಾಗಿ 2 ವರ್ಷ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಯಶಸ್ವಿಯಾಗಿ ಕೆಲಸ ಮಾಡ್ತಾ ಇದ್ದಾರೆ. ಯಾರೂ ಮಾತನಾಡಬಾರದೆಂದು ಹೈಕಮಾಂಡ್ ನಮಗೆ ಹೇಳಿದೆ. ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ. ನಾವು ಸುಮ್ಮನೆ ಇದ್ದೇವೆ ಅಂದ್ರೆ ಅದು ನಮ್ಮ ದೌರ್ಬಲ್ಯ ಅಲ್ಲ. ಸೂರ್ಯ ಚಂದ್ರ ಇರುವಷ್ಟೇ ಸತ್ಯವಾಗಿ ವಿಜಯೇಂದ್ರ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. 2028ರ ಚುನಾವಣೆ ಅವರ ನೇತೃತ್ವದಲ್ಲಿ ಎದುರಿಸುತ್ತೇವೆ ಅಂತ ತಿಳಿಸಿದರು.
ಬಿಜೆಪಿಯಲ್ಲಿ ಬಣ ಇಲ್ಲ
ದೆಹಲಿಗೆ ಹೋಗಿರೋರು ಅವರ ಕ್ಷೇತ್ರದಲ್ಲಿ ಸಂಘಟನೆ ಮಾಡಿಲ್ಲ. ಹಣ ಇದೆ ಅಂತ ಫ್ಲೈಟ್ ಮಾಡಿಕೊಂಡು ಹೋಗಿದ್ದಾರೆ. ಅವರ ಕ್ಷೇತ್ರದಲ್ಲಿ ಇವರು ಬಿಗ್ ಜಿರೋ. ಕಾಫಿ ಕುಡಿದು ಬರ್ತಾರೆ ಅಷ್ಟೆ. ಯಾವುದೇ ಹೈಕಮಾಂಡ್ (BJP High Command) ನಾಯಕರು ಇವರಿಗೆ ಸಮಯ ಕೊಟ್ಟಿಲ್ಲ. ಅವರ ಕ್ಷೇತ್ರದಲ್ಲಿ ಅಭಿವೃದ್ಧಿ ಇಲ್ಲ, ಶೂನ್ಯ ಸಾಧನೆ. ಇವರಿಗೆ ಜನ 100ಕ್ಕೆ ಜನ ʻ0ʼ ಅಂಕ ಕೊಡ್ತಿದ್ದಾರೆ. ರಾಜ್ಯಾಧ್ಯಕ್ಷರು ಬದಲಾವಣೆ ಅಂತ ಹಗಲು ಕನಸು ಕಾಣ್ತಾ ಇದ್ದಾರೆ. ಚಳಿ ಇದೆ, ಅಲ್ಲಿ ಕಾಫಿ ಕುಡಿದು ಬರ್ತಾರೆ. ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ. ನಮ್ಮದು ಕಮಲದ ಗುರುತು. ದೇಶದಲ್ಲಿ ಮೋದಿ, ಅಮಿತ್ ಶಾ, ನಡ್ಡಾ, ರಾಜ್ಯದಲ್ಲಿ ಯಡಿಯೂರಪ್ಪ ನಮ್ಮ ನಾಯಕರು ಎಂದರು.
ಈ ರಾಜ್ಯ ಸರ್ಕಾರ ಸತ್ತು ಹೋಗಿದೆ. ಇದರ ವಿರುದ್ದ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕ ನೇತೃತ್ವದಲ್ಲಿ ಹೋರಾಟ ಮಾಡ್ತೀವಿ. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ. ಯಡಿಯೂರಪ್ಪ ಹೋರಾಟಗಾರ, ಅವರ ರಕ್ತದ ಕಣಕಣದಲ್ಲೂ ಹಿಂದುತ್ವ, ಪಕ್ಷ ಇದೆ. ಅವರ ನಾಯಕತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಸಂಘಟನೆ ಆಗಿದೆ ಅಂತ ತಿಳಿಸಿದರು.
ದೆಹಲಿಯಲ್ಲಿ ಬೆಚ್ಚಗೆ ಮಲಗಿದ್ದು ಬರಲಿ
ದೆಹಲಿಗೆ ಹೋಗಿ ಕಾಫಿ, ಟೀ ಕುಡಿದು ಕೆಲವರು ಸುದ್ದಿ ಮಾಡೋಕೆ ಹೊರಟಿದ್ದಾರೆ. ರಾಜ್ಯದ ಜನರು ಪ್ರಜ್ಞಾವಂತರು ಇದ್ದಾರೆ. ಯಡಿಯೂರಪ್ಪ ಕೆಲಸ ನಮಗೆ ಶ್ರೀರಕ್ಷೆ. ಮೋದಿ ಅವರ ಕೆಲಸ ಶ್ರೀರಕ್ಷೆ. ದೆಹಲಿಯಲ್ಲಿ ಚಳಿ ಬಹಳ ಇದೆ, ತುಂಬಾ ಮಂಜಿದೆ. ಬೆಡ್ ಶೀಡ್, ರಗ್ಗು ಅಥವಾ ಏನೇನು ಬೇಕೊ ಅದನ್ನ ತಗೊಂಡು ಬೆಚ್ಚಗೆ ಹೋಗಿ, ಬೆಚ್ಚಗೆ ಬರಲಿ ಅಂತ ಆಶಿಸುತ್ತೇನೆ ಅಂತ ರೆಬಲ್ ಟೀಂಗೆ ಲೇವಡಿ ಮಾಡಿದ್ರು.
ಯಾರು ರಾಜ್ಯದ ಹಾಗೂ ದಾವಣಗೆರೆ ಜಿಲ್ಲೆಯ ಅಧ್ಯಕ್ಷರನ್ನ ಬದಲಾವಣೆ ಮಾಡುವ ಕನಸು ಕಾಣ್ತಿದ್ದಾರೋ ಅವರಿಗೆ ನಾನೊಂದು ಸಲಹೆ ಕೊಡ್ತೀನಿ. ಬಹಳ ಷಳಿ ಇದೆ, ಆರೋಗ್ಯದ ಬಗ್ಗೆ ಗಮನಹರಿಸಿ. ನಿಮ್ಮ ಆರೋಗ್ಯದ ಬಗ್ಗೆ ಕಳಕಳಿ ಇದೆ. ಅಲ್ಲಿ ಕಾಫಿ-ಟೀ ಕುಡಿದು ಸುದ್ದಿ ಮಾಡೋದು ಬೇಡ. ಸಿಎಂ-ಡಿಸಿಎಂ ನಡುವೆ ಆಗ್ತಿರೋ ಕುರ್ಚಿ ಗಲಾಟೆ ರೀತಿ ಬೇಡ. ರೆಬಲ್ ಟೀಂಗೆ ರೇಣುಕಾಚಾರ್ಯ ತಿರುಗೇಟು ಕೊಟ್ಟರು.


