ಮೈಸೂರು: ಯುದ್ಧದ ವೇಳೆ ಗಡಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬದವರಿಗೆ ಅವಮಾನ ಮಾಡುವ ರೀತಿ ಮಾತನಾಡಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.
ಭಾನುವಾರ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಸುಧಾ ಮೂರ್ತಿ ರವರು ಇಂದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೈಸೂರು ಹಾಗೂ ಹಾಸನ ಜಿಲ್ಲೆಯ ಹುತಾತ್ಮ ಹಾಗೂ ಗಾಯ ಗೊಂಡಿರುವ 6 ಸೈನಿಕರ ಕುಟುಂಬದ ವರ್ಗದವರಿಗೆ ರೂ 10 ಲಕ್ಷ ಡಿಡಿಯನ್ನು ವಿತರಿಸುವ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ವೇಳೆ ಪ್ರತಾಪ್ ಸಿಂಹ ಸೈನಿಕ ಕುಟುಂಬದರಿಗೆ ಜೋರು ಮಾಡಿದ್ದು, ಆ ವಿಡಿಯೋ ಈಗ ವೈರಲ್ ಆಗಿದೆ.
Advertisement
Advertisement
ವಿಡಿಯೋದಲ್ಲಿ ಏನಿದೆ?
ಈ ಕಾರ್ಯಕ್ರಮ ನಡೆಯುವ ಮುನ್ನ 18 ವರ್ಷದಿಂದ ಹಿಂದೆ ಯುದ್ಧದಲ್ಲಿ ಹುತಾತ್ಮರಾಗಿದ್ದ ಕೊಡಗು ಮೂಲದ ಸೈನಿಕ ಕುಟುಂಬ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಆಳುತ್ತಾ ಬಂದು ನಮಗೂ ಹಣ ಕೊಡಿಸಿ ಅಂತಾ ಸಂಸದ ಪ್ರತಾಪ್ ಸಿಂಹ ಬಳಿ ಕೇಳಿದ್ದಾರೆ. ಅವರಿಗೆ ಮಾತ್ರ 10 ಲಕ್ಷ ಕೊಡಿಸುತ್ತಿದ್ದೀರಿ, ನಮಗೆ ಯಾಕೆ ಕೊಡುತ್ತಿಲ್ಲ ಎಂದು ಒಬ್ಬಾಕೆ ಜೋರಾಗಿ ಅಳಲು ಶುರುಮಾಡಿದ್ದಾರೆ. ಇದಕ್ಕೆ ಗರಂ ಆದ ಪ್ರತಾಪ್ ಸಿಂಹ ಅಳುವ ನಾಟಕ ಎಲ್ಲಾ ಮಾಡಬೇಡಿ. ಈಗ ಆಗಲ್ಲ. ನಡೀರಿ ಎಂದು ಹೇಳಿದ್ದಾರೆ.
Advertisement
Advertisement
ಸಂಸದರ ಸ್ಪಷ್ಟನೆ ಏನು?
ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರವೇಶಿಸುತಿದ್ದೇನೆ, ಅಷ್ಟರಲ್ಲೇ, ಅವರಿಗೆ ಮಾತ್ರ 10 ಲಕ್ಷ ಕೊಡಿಸುತ್ತಿದ್ದೀರಿ, ನಮಗೆ ಯಾಕೆ ಕೊಡುತ್ತಿಲ್ಲ ಎಂದು ಒಬ್ಬಾಕೆ ಜೋರಾಗಿ ಅಳಲು ಶುರುಮಾಡಿದರು. ನನಗೆ ಕಿರಿಕಿರಿಯಾಯಿತು, ನಮಗೂ ಕೊಡಿಸಿ ಅಂತ ಕೇಳಿ, ಅವರಿಗೆ ಕೊಡಲಾಗುತ್ತಿದೆ ಅಂತ ದುಡ್ಡನ್ನು ಮುಂದಿಟ್ಟುಕೊಂಡು ಅಳಬೇಡಿ ಎಂದು ಜೋರು ಮಾಡಿದೆ. ನಂತರ ಮೇಡಂ ಗಮನಕ್ಕೆ ತಂದು ಹೇಳುತ್ತೇನೆ ಎಂದು ಕಚೇರಿ ಒಳಗೆ ಹೋಗಿ, “ಮೇಡಂ ಕಳೆದ ಮೂರು ವರ್ಷಗಳಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ತಲಾ 10 ಲಕ್ಷ ಕೊಡುತ್ತೇನೆ ಅಂತ ಹೇಳಿದ್ದಿರಿ, ಆದರೆ 18-20 ವರ್ಷ ಹಿಂದೆ ಮಡಿದವರ ಕುಟುಂಬದವರೂ ಬಂದಿದ್ದಾರೆ, ಏನು ಮಾಡೋದು?” ಎಂದು ಕೇಳಿದೆ. ಆಗ ಸುಧಾಮೂರ್ತಿಯವರು ಒಂದು ಕಾಲ ಮಿತಿಯನ್ನು ಇಟ್ಟುಕೊಳ್ಳೋಣ, ನೀನೆ ಹೇಳು ಎಂದರು. 1999ರ ಕಾರ್ಗಿಲ್ ಯುದ್ಧ ಮತ್ತು ತದನಂತರ ಹುತಾತ್ಮರಾದ ಸೈನಿಕರನ್ನು ಗಣನೆಗೆ ತೆಗೆದುಕೊಳ್ಳೋಣ ಎಂದೇ. ಮೇಡಂ ಯಸ್ ಎಂದರು. ಮೇಡಂ, ಕೈ ಕಾಲು ಊನಗೊಂಡವರನ್ನೂ ಸೇರಿಸೋಣ ಎಂದು ಮತ್ತೆ ಕೇಳಿದೆ. ಅದಕ್ಕೂ ಯಸ್ ಎಂದರು.
ಕರ್ನಾಟಕದ ಮೂಲೆ ಮೂಲೆಗೆ ಸೇರಿರುವ ಹುತಾತ್ಮ ಸೈನಿಕರ ಕುಟುಂಬದವರನ್ನು ಪತ್ತೆ ಮಾಡಿ, ದಾಖಲೆ ಕಲೆಹಾಕಿ ವ್ಯವಸ್ಥೆ ಮಾಡಲು ಹೊರಟಿರುವುದು ಸೈನಿಕರ ಬಗ್ಗೆ ನನಗಿರುವ ಕಾಳಜಿಯ ದ್ಯೋತಕವೇ ಹೊರತು ಕ್ಷಣದ ಕಾಂಟ್ರವರ್ಸಿ ಸೃಷ್ಟಿಸುವ ಮಾಧ್ಯಮಗಳಂತೆ ನಾನು ವೋಟಿಗಾಗಿ ಕೆಲಸ ಮಾಡುವ ರಾಜಕಾರಣಿಯಲ್ಲ. ಈ 6 ಜನರ ಕುಟುಂಬವನ್ನು ಪತ್ತೆ ಮಾಡಿ, ಕಾರ್ಯಕ್ರಮ ವ್ಯವಸ್ಥೆ ಮಾಡುವವರೆಗೂ ಯಾವುದಾದರೂ ಚಾನೆಲ್ ಗಳು ಈ ಕುಟುಂಬಗಳನ್ನು ತಿರುಗಿ ನೋಡಿದ್ದವ? ಸೈನಿಕನ ಪತ್ನಿಗೆ (ಅವರು ತಾಯಿ) ಅವಮಾನ ಎಂದು ಸುಳ್ಳೇ ಬೊಬ್ಬಿರಿಯುತ್ತಿರುವವರಿಗೆ ಏನು ಹೇಳೋದು? ಆಕೆಯ ಮಗ 15 ವರ್ಷಗಳ ಹಿಂದೆ ಅಂದರೆ 2003 ರಲ್ಲಿ ಮಡಿದಿದ್ದಾರಂತೆ, ಅದರ ಬಗ್ಗೆ ನಮ್ಮ ಸಾಂತ್ವನವೂ ಇದೆ. ಸಹಾಯ ನಿರೀಕ್ಷೆ ಮಾಡುವುದೂ ತಪ್ಪಲ್ಲ, ಹಾಗಂತ ಅವರಿಗೆ ದುಡ್ಡು ಕೊಡಿಸುತ್ತಿದ್ದೀರಿ, ನಮಗೆ ಯಾಕೆ ಕೊಡುತ್ತಿಲ್ಲ ಎಂದು ದುಡ್ಡನ್ನು ದೃಷ್ಟಿಯಲ್ಲಿಟ್ಟುಕೊಂಡು ಅಳಲು ಶುರುಮಾಡಿದ್ದು ಕೃತಕವೆನಿಸಿಬಿಡುತ್ತದೆ. ಇದೇನೇ ಇರಲಿ, ಮಾಧ್ಯಮಗಳು ಏನೇ ಟೀಕೆ ಮಾಡಿದರೂ ಎಲ್ಲದರ ದಾಖಲೆ ಕಲೆಹಾಕಿ ಸಹಾಯ ಕೊಡಿಸುವ ಕರ್ತವ್ಯವನ್ನು ಖಂಡಿತ ಬಿಡುವುದಿಲ್ಲ. ಅಳುತಿದ್ದಾಕೆಗೂ ನಾಳೆ ದಾಖಲೆ ತೆಗೆದುಕೊಂಡು ಕಚೇರಿಗೆ ಬರಲು ಹೇಳಿದ್ದೇನೆ.
ಕಾರ್ಗಿಲ್ ಯುದ್ಧ ಹಾಗೂ ಅದರಿಂದೀಚೆಗೆ ಹುತಾತ್ಮರಾದ, ಅಂಗಾಂಗ ಊನಗೊಂಡ ಕರ್ನಾಟಕದ ಸೈನಿಕರ ಬಗ್ಗೆ ನಿಮಗೆ ತಿಳಿದಿದ್ದರೆ ನನ್ನ ಕಚೇರಿಯನ್ನು ಸಂಪರ್ಕಿಸಿ, ಕುಟುಂಬವರ್ಗದವರು ಗೊತ್ತಿದ್ದರೆ ನನ್ನ ಕಚೇರಿಯ 0821-2444999 ನಂಬರ್ ಸಂಪರ್ಕಿಸಿ ಎಂದು ಪ್ರತಾಪ್ ಸಿಂಹ ಫೇಸ್‍ಬುಕ್ ನಲ್ಲಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv