ಮೈಸೂರು: ಜೆಎನ್‍ಯುಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭೇಟಿ ವಿಚಾರಕ್ಕೆ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ದೀಪಿಕಾ ಪಡುಕೋಣೆಯವರ ಹೊಸ ಚಿತ್ರ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಅವರಿಗೆ ಬೆಸ್ಟ್ ಆಫ್ ಲಕ್ ಹೇಳುತ್ತೇನೆ. ಅವರು ಒಳ್ಳೆಯ ವಿಚಾರಗಳಿಗೆ ಬೆಂಬಲ ಸೂಚಿಸಿದರೆ ಒಳಿತು. ಒಳ್ಳೆಯ ಸಿನಿಮಾ ಮಾಡಿದರೆ ಜನ ಮೆಚ್ಚಿ ನೋಡುತ್ತಾರೆ ಎಂದರು.
ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ದೇಶದಲ್ಲಿ ಕೇವಲ ಜೆಎನ್‍ಯು, ಜಾಮಿಯಾ ಮಿಯಾ ವಿವಿಗಳು ಮಾತ್ರ ಇಲ್ಲ. ದೇಶಾದ್ಯಂತ 600ಕ್ಕೂ ಹೆಚ್ಚು ವಿವಿಗಳಿವೆ ಅವುಗಳತ್ತವೂ ನೋಡಲಿ. ಹೋರಾಟಗಳಲ್ಲಿ ಭಾಗಿಯಾಗಬೇಡಿ ಎಂದು ಹೇಳುವುದಿಲ್ಲ. ಒಳ್ಳೆಯ ವಿಚಾರಗಳಿಗೆ ಬೆಂಬಲ ಕೊಡಲಿ ಎಂದು ನಟಿ ದೀಪಿಕಾ ಪಡುಕೋಣೆಗೆ ಟಾಂಗ್ ನೀಡಿದರು.
ದೆಹಲಿಯ ಜೆಎನ್‍ಯುನಲ್ಲಿ ನಡೆದಿರುವ ಗೂಂಡಾಗಿರಿಗೆ ಸಂಬಂಧಿಸಿದಂತೆ ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ. ಘಟನೆಯಲ್ಲಿ ಎಬಿವಿಪಿ ಕಾರ್ಯಕರ್ತರಿಗೂ ಪೆಟ್ಟು ಬಿದ್ದಿದೆ. ಇದೀಗ ಸಿನಿಮಾ ನಟ-ನಟಿಯರನ್ನು ಕರೆತಂದು ಪ್ರಕರಣಕ್ಕೆ ಬೇರೆ ರೂಪ ಕೊಡುವ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದರು.
ಜವಾಹರಲಾಲ್ ನೆಹರು ಸ್ಥಾಪಿಸಿದ ಜೆಎನ್‍ಯುಗೆ ಸ್ವತಃ ಇಂದಿರಾಗಾಂಧಿಯವರು ಪ್ರವೇಶಿಸಲು ಅನುಮತಿ ನೀಡಿರಲಿಲ್ಲ. ಇಂದಿರಾ ಗಾಂಧಿಯವರಿಗೂ ಭಾಷಣ ಮಾಡದಂತೆ ಅಡ್ಡಿ ಪಡಿಸಲಾಗಿತ್ತು. ಪರಿಣಾಮ 45 ದಿನಗಳ ಕಾಲ ಜೆಎನ್‍ಯು ವನ್ನು ಇಂದಿರಾಗಾಂಧಿಯವರು ಬಂದ್ ಮಾಡಿಸಿದ್ದರು. ಇದು ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.