– ಬಕೆಟ್‍ಗಳಲ್ಲಿ ಕಲ್ಲುಗಳನ್ನಿಟ್ಟು ಕಾದಿದ್ದ ಕಾರ್ಯಕರ್ತರು
ಮೈಸೂರು: ಸಿದ್ದರಾಮನಹುಂಡಿ (Siddaramana Hundi) ಏನು ಸಿದ್ದರಾಮಯ್ಯನ (Siddaramaiah) ಸಂಸ್ಥಾನನಾ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಕಿಡಿಕಾರಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮನಹುಂಡಿಯಲ್ಲಿ ಬಿಜೆಪಿ (BJP) ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ನಡೆದ ಹಲ್ಲೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಸಣ್ಣತನ ಯಾಕೆ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಗುರುವಾರ ಬಿಜೆಪಿ ಪ್ರಚಾರ ಮೆರವಣಿಗೆ ಮೇಲೆ ಕಾಂಗ್ರೆಸ್ (Congress) ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಸಿದ್ದರಾಮಯ್ಯ ಪಾಳಯದಲ್ಲಿ ಹತಾಶೆ ಮತ್ತು ಸೋಲಿನ ಭಯ ಶುರುವಾಗಿದೆ. ಇದರಿಂದ ಬಿಜೆಪಿ ಕಾರ್ಯಕರ್ತರು ಪ್ರಚಾರಕ್ಕೆ ಹೋದ ಕಡೆ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಅಲ್ಲದೆ ಹಲ್ಲೆಗೆ ಮುಂದಾಗುತ್ತಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರ ಅಣ್ಣನ ಮನೆ ಮುಂದೆಯೇ ಗಲಾಟೆ ನಡೆದಿದೆ – ವಿ.ಸೋಮಣ್ಣ ಕಿಡಿ
ಮೊದಲೇ ಬಕೆಟ್‍ಗಳಲ್ಲಿ ಕಲ್ಲುಗಳನ್ನು ಇಟ್ಟುಕೊಂಡು ಗಲಾಟೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲೇನೂ ಸಿದ್ದರಾಮಯ್ಯ ಪಾಳೇಗಾರಿಕೆ ಮಾಡುತ್ತಿದ್ದಾರಾ? ಸೋಮಣ್ಣ (V.Somanna) ಒಂದು ಕರೆ ಕೊಟ್ಟರೆ ನಿಮಗೂ ಎಲ್ಲಾ ಊರುಗಳಲ್ಲಿ ಇದೇ ರೀತಿಯ ಘಟನೆ ಎದುರಾಗಬಹುದು. ಇದನ್ನು ನೀವು ಮುಂದುವರಿಸಿದರೆ ನಮಗೂ ಶಕ್ತಿ ಇದೆ. ಅದನ್ನು ನಾವು ಸಾಬೀತು ಮಾಡಬೇಕಾಗುತ್ತದೆ. ಆಗ ವರುಣದ ಶಾಂತಿ ಕೆಡುತ್ತದೆ ಎಂದು ಗುಡುಗಿದ್ದಾರೆ.
ಸಿದ್ದರಾಮಯ್ಯ ಅವರು ಸ್ವಜಾತಿಗೆ ಮನ್ನಣೆ ಕೊಟ್ಟು ಈ ರೀತಿ ತೊಂದರೆ ಕೊಡಿಸುತ್ತಿದ್ದಾರೆ. ಅವರೊಬ್ಬ ಜಾತಿವಾದಿ, ವರುಣ ಜನರಿಗೆ ಇದು ಗೊತ್ತಾಗಿದೆ. ಇದೇ ಕಾರಣಕ್ಕೆ ಎಲ್ಲಾ ವರ್ಗದ ಜನ ಸೋಮಣ್ಣರ ಪರವಾಗಿ ನಿಂತಿದ್ದಾರೆ ಎಂದಿದ್ದಾರೆ.
ಕಾಪು ಸಿದ್ದಲಿಂಗಸ್ವಾಮಿ ಮಾತನಾಡಿ, ನಾನು ಎಂದಿಗೂ ಬಿಜೆಪಿ ತೊರೆಯುವುದಿಲ್ಲ. ಕತ್ತು ಸೀಳಿದರೂ ಪಕ್ಷಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ. ಸಾಯುವವರೆಗೂ ಪಕ್ಷಕ್ಕಾಗಿ ದುಡಿಯುತ್ತೇನೆ. ಕಾಂಗ್ರೆಸ್‍ನವರು ಸೋಲಿನ ಹತಾಶೆಯಿಂದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ: ಸಹೋದರಿ ನಿವಾಸಕ್ಕೆ ಮಧು ಬಂಗಾರಪ್ಪ