ಮೈಸೂರು: ಪೊಲೀಸರ ಮೇಲೆ ಹಲ್ಲೆ ಮಾಡಿದವರು ಅನಕ್ಷರಸ್ಥರು ಎಂದು ಕಿಡಿಗೇಡಿಗಳನ್ನು ಸಮರ್ಥಿಸಿಕೊಂಡಿದ್ದ ಶಾಸಕ ಜಮೀರ್ ಅಹಮದ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದು, ಗೂಂಡಾ ಕಾಯ್ದೆ ಹಾಕಿ ಜಮೀರ್ ಅಹಮದ್ ಅವರನ್ನು ಬಂಧಿಸಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಾದರಾಯನಪುರದಲ್ಲಿ ನಡೆದ ಇಡೀ ಘಟನೆಗೆ ಜಮೀರ್ ಅಹಮದ್ ನೇರ ಕಾರಣ. ಹೀಗಾಗಿ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಥವಾ ಗೂಂಡಾ ಕಾಯ್ದೆ ಹಾಕಿ ಬಂಧಿಸಬೇಕು. ಶಾಸಕ ಜಮೀರ್ ಅಹಮದ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿತ್ತು. ಹೀಗಾಗಿ ರಾಷ್ಟ್ರೀಯ ಭದ್ರತಾ ಕಾಯ್ದೆ ಅಥವಾ ಗೂಂಡಾ ಕಾಯ್ದೆಯಡಿ ಜಮೀರ್ ಅಹ್ಮದ್ ಅವರನ್ನು ಬಂಧಿಸಬೇಕು. ಈ ರೀತಿ ವರ್ತಿಸುವ ಎಲ್ಲ ಜನಪ್ರತಿನಿಧಿಗಳಿಗೂ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.
Advertisement
Advertisement
ಶಾಸಕರ, ಸಂಸದರ ಅಪ್ಪಣೆ ಪಡೆದು ಹೋಗಲು ಜನ ಆ ಜಾಗವನ್ನು ಅವರಿಗೆ ಬರೆದುಕೊಟ್ಟಿದ್ದಾರಾ, ಆ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಾರಷ್ಟೆ, ಯಾರಿಗೂ ಬರೆದುಕೊಟ್ಟಿಲ್ಲ. ಆದರೆ ಇದೀಗ ಶಾಸಕರು, ಸಂಸದರು ಇದು ನನ್ನ ಕ್ಷೇತ್ರ, ನನ್ನ ಕ್ಷೇತ್ರದಲ್ಲಿ ಏನೇ ನಡೆಯಬೇಕಿದ್ದರೂ ನನ್ನನ್ನು ಕೇಳಿಯೇ ಮಾಡಬೇಕು ಎನ್ನುವ ಮನಸ್ಥಿತಿ ಹೊಂದಿದ್ದಾರೆ. ಇದರಿಂದ ಅವರು ಹೊರಗೆ ಬರಬೇಕು ಎಂದರು.
Advertisement
ಹಲ್ಲೆ ಮಾಡಿದವರು ಅನಕ್ಷರಸ್ಥರು ಎಂದು ಜಮೀರ್ ಹೇಳುತ್ತಾರೆ. ಸಿಎಎ, ಎನ್‍ಆರ್‍ಸಿ ಕಾಯ್ದೆ ಬಗ್ಗೆ ಮಾತಾಡುವ ಈ ಜನರನ್ನು ಅನಕ್ಷರಸ್ಥರು ಎನ್ನಲು ಆಗುತ್ತಾ ಎಂದು ಪ್ರಶ್ನಿಸಿದರು. ಅಲ್ಲದೆ ಹಲ್ಲೆ ಮಾಡಿದವರ ಮೇಲೆ ಸಾಫ್ಟ್ ಕಾರ್ನಾರ್ ತೋರುವ ಎಡಪಂಥೀಯರನ್ನು ತಬ್ಲೀಘಿಗಳಿರುವ ಏರಿಯಾಕ್ಕೆ ಕಳಿಸಿ, ಹೋಮ್ ಕ್ವಾರಂಟೈನ್ ಆದವರ ಜೊತೆ ಇರುವುದಕ್ಕೆ ಬಿಡಿ. ಎಡಪಂಥೀಯರ ನಿಯತ್ತು ಈ ದೇಶಕ್ಕೆ ಅಲ್ಲ. ಪಕ್ಕದ ದೇಶಕ್ಕೆ ಅನ್ನೋದು ಗೊತ್ತಿದೆ ಎಂದರು.
Advertisement
ಮುಖ್ಯಮಂತ್ರಿಗಳು ಯಾರೂ ಮುಸ್ಲಿಂ ಸಮುದಾಯದ ವಿರುದ್ಧ ಹೇಳಿಕೆ ನೀಡಬೇಡಿ, ಮುಸ್ಲಿಂ ಸಮುದಾಯದ ನಾಯಕರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದರು. ಮುಖ್ಯಮಂತ್ರಿಗಳು ಸದುದ್ದೇಶದಿಂದ ಈ ಮಾತು ಹೇಳಿದ್ದಾರೆ. ಆದರೆ ಜಮೀರ್ ಸೇರಿದಂತೆ ಇತರರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.