Dharwad
ಸರ್ಕಾರ ತಪ್ಪು ಮಾಡಿಲ್ಲ ಅಂದ್ರೆ ಸಿಬಿಐಗೆ ಒಪ್ಪಿಸಲಿ: ಪ್ರಹ್ಲಾದ ಜೋಶಿ

ಧಾರವಾಡ: ಸರ್ಕಾರ ತಪ್ಪು ಮಾಡಿಲ್ಲದೇ ಇದ್ದರೆ ತಕ್ಷಣವೇ ಕಲ್ಲಿದ್ದಲು ಹಗರಣವನ್ನು ಸಿಬಿಐಗೆ ಒಪ್ಪಿಸಲಿ ಎಂದು ಸಂಸದ ಪ್ರಹ್ಲಾದ ಜೋಶಿ ಸವಾಲು ಹಾಕಿದ್ದಾರೆ.
ಯಡಿಯೂರಪ್ಪ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ ದಾಖಲೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಎಸಿಬಿ ಸರ್ಕಾರದ ಕೈಗೊಂಬೆಯಾಗಿದೆ. ಎಸಿಬಿಯಿಂದ ಸತ್ಯ ಹೊರಬರುವುದಿಲ್ಲ. ಸಿಎಂ ಸಿದ್ದರಾಮಯ್ಯ ಲೋಕಾಯುಕ್ತರನ್ನು ಹಲ್ಲು ಕಿತ್ತು ಹಾವು ಮಾಡಿದ್ದಾರೆ. ಮುಖ್ಯಮಂತ್ರಿಗಳೇ ನಿಮಗೆ ನೈತಿಕತೆ ಅನ್ನೋದು ಏನಾದರೂ ಇದ್ದರೆ ರಾಜಿನಾಮೆ ನೀಡಿ ಎಂದು ಆಗ್ರಹಿಸಿದರು.
ಸಚಿವ ವಿನಯ್ ಕುಲಕರ್ಣಿ ಕೈಲಾಗದವನು, ಕೈಲಾಗದವನು ಮೈ ಪರಚಿಕೊಂಡ ಎಂಬಂತಾಗಿದೆ. ವಿನಯ್ ಕುಲಕರ್ಣಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ವಿನಯ್ ಕುಲಕರ್ಣಿ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಸೋತಿದ್ದು ಮರೆತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಯಾಗಲು ವಿನಯ್ ಕುಲಕರ್ಣಿ ಅವರೇ ಕಾರಣ ಎಂದು ಜೋಶಿ ಆರೋಪಿಸಿದರು.
ವಿನಯ್ ಕುಲಕರ್ಣಿ ಅವರು ಅಲ್ಪಸಂಖ್ಯಾತರ ಓಲೈಕೆಗಾಗಿ, ಹಿಂದೂಗಳ ವಿರೋಧವಾಗಿ ನಿಲ್ಲುತ್ತಿದ್ದಾರೆ. ನಿಜವಾಗಿಯೂ ನಿಮಗೆ ತಾಕತ್ತಿದ್ದರೆ ನಮ್ಮ ಮಹಾನಗರ ಪಾಲಿಕೆಗೆ ಬರುವ 137 ಕೋಟಿ ಪಿಂಚಣಿ ಹಣ ಬಿಡುಗಡೆ ಮಾಡಿಸಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: 418 ಕೋಟಿ ರೂ. ಹಗರಣದ ಆರೋಪ- ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಎಸ್‍ವೈ ದಾಖಲೆ ಬಿಡುಗಡೆ
ರಾಹುಲ್ ಗಾಂಧಿ ತರಹ ಮಾತನಾಡಬೇಡಿ, ಯಾರೋ ಬರೆದು ಕೊಟ್ಟಿದ್ದನ್ನು ಓದಬೇಡಿ, ಸ್ವಂತ ಬುದ್ದಿ ಉಪಯೋಗಿಸಿ ಮಾತನಾಡಿ. ಸಚಿವ ದೇಶಪಾಂಡೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆಂದು ಹಗಲು ಕನಸು ಕಾಣುತ್ತಿದ್ದಾರೆ. ಮೊದಲು ಅವರು ಮುಂದಿನ ಚುನಾವಣೆಗೆ ಯಾವ ಪಕ್ಷದಲ್ಲಿ ಇರುತ್ತಾರೆ ಎಂದು ಜನರಿಗೆ ತಿಳಿಸಲಿ. ರಾಜ್ಯ ಸರ್ಕಾರ ಧಾರವಾಡದಲ್ಲಿ ಸಾಧನಾ ಸಮಾವೇಶ ಮಾಡಲು ಹೊರಟಿದೆ. ಇದು ಸಾಧನಾ ಸಮಾವೇಶ ಅಲ್ಲ, ಕಾಂಗ್ರೆಸ್ ಸಮಾವೇಶ ಎಂದು ಜೋಶಿ ದೂರಿದರು.
\
