ಚಿತ್ರದುರ್ಗ: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಸಂಸದ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬಿಜೆಪಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ಪಾಕಿಸ್ತಾನ, ಹಿಂದೂಗಳಿಗೆ ಭಾರತ ಎಂದು ಗಾಂಧೀಜಿಯವರು ವಿಭಜನೆ ಮಾಡಿ ಕೈಗೊಂಡ ನಿರ್ಧಾರಕ್ಕೆ ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರು ಮುದ್ರೆ ಒತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾಗಿತ್ತು. ನಾವೇನು ಸಿಎಎ ವಿಚಾರದಲ್ಲಿ ಹೊಸದಾಗಿ ಕಾನೂನು ಮಾಡಿದ್ದೇವೆಯೇ ಎಂದು ಪ್ರಶ್ನಿಸಿದರು.
Advertisement
Advertisement
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬಂಡವಾಳ ಮಾಡಿಕೊಂಡು ಹೋರಾಟ, ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಸಂವಿಧಾನ ಅರಿತು ಚರ್ಚಿಸಲಿ. ದೇಶದಲ್ಲಿ ಶಾಂತಿ ಕದಡುವ ಕೆಲಸ ಬಿಡಲಿ ಎಂದು ವಾಗ್ದಾಳಿ ನಡೆಸಿದರು.
Advertisement
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದಕ್ಕೆ 65 ವರ್ಷಗಳ ಕಾಲ ಜಮ್ಮು ಸಿಎಂಗೆ ಅಲ್ಲಿ ಪ್ರಧಾನಿ ಎನ್ನಲಾಗುತ್ತಿತ್ತು. ಆದರೆ ಜಮ್ಮು ಕಾಶ್ಮೀರಕ್ಕೆ ಭಾರತದ ಪ್ರಧಾನಿ ಹೋದಾಗ ತ್ರಿವರ್ಣ ಧ್ವಜ ಹಾರಿಸುವ ಯೋಗ್ಯತೆ ಕೂಡ ಇವರಿಗೆ ಇರಲಿಲ್ಲ. ದೇಶದಲ್ಲಿ ಇಷ್ಟೆಲ್ಲಾ ಬದಲಾವಣೆ ತಂದು ಎಲ್ಲರ ಹಿತ ಕಾಯುತ್ತಿರುವ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ವಿರೋಧ ಪಕ್ಷಗಳಿಗಿಲ್ಲ ಎಂದರು. ಈ ವೇದಿಕೆಯಲ್ಲಿ ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಸೇರಿದಂತೆ ಜಿಲ್ಲೆಯ ಬಿಜೆಪಿ ಮುಖಂಡರು ಭಾಗವಹಿಸಿದ್ದರು.