ಭೋಪಾಲ್: ನಿರ್ಮಾಣವಾಗಿ 3 ತಿಂಗಳಲ್ಲೇ 7.78 ಕೋಟಿಯ ಸೇತುವೆಯೊಂದು ಕುಸಿದು ಬಿದ್ದ ಘಟನೆ ಶಿವಪುರಿ ಜಿಲ್ಲೆಯ ಪೊಹ್ರಿ ಟೆಹ್ಸಿಲ್ ಎಂಬಲ್ಲಿ ನಡೆದಿದೆ.
ಕುನೋ ನದಿಗೆ ಈ ಸೇತುವೆ ನಿರ್ಮಾಣ ಮಾಡಲಾಗಿದ್ದು, 3 ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿತ್ತು. ಆದ್ರೆ ಶನಿವಾರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಅರ್ಧ ಸೇತುವೆಯೇ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಉಂಟಾಗಿದೆ. ನಗರ ಪ್ರದೇಶದಲ್ಲಿ ಸುಮಾರು 500ಕ್ಕೂ ಹೆಚ್ಚು ಮನೆಗಳು ನಾಶವಾಗಿದೆ ಅಂತ ಜಿಲ್ಲೆಯ ಮೂಲಗಳಿಂದ ತಿಳಿದುಬಂದಿದೆ.
Advertisement
Advertisement
ಪ್ರವಾಹದಿಂದಾಗಿ 1 ವರ್ಷದ ಮಗುವೊಂದು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮೃತಪಟ್ಟಿದೆ. ಹಲವು ಗ್ರಾಮಗಳಿಂದ ಸುಮಾರು 150ಕ್ಕೂ ಹೆಚ್ಚು ಮಂದಿಯನ್ನು ಶನಿವಾರ ರಕ್ಷಣೆ ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ.
Advertisement
ಕುನೋ ನದಿಗೆ ನಿರ್ಮಿಸಲ್ಪಟ್ಟ ಈ ಸೇತುವೆಯನ್ನು ಇದೇ ವರ್ಷ ಜೂನ್ 29ರಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಿಕೊಟ್ಟರು. ಬಳಿಕ ಮಾತನಾಡಿದ ಅವರು, ಮಧ್ಯಪ್ರದೇಶ ಹಾಗೂ ರಾಜಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆ ನಿರ್ಮಾಣ ಮಾಡಲು 778 ಲಕ್ಷ ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಮೂಲಕ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯುತ್ತಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇದಾಗಿದೆ.
Advertisement
ಡಿಸಿ ಶಿಲ್ಪಿ ಗುಪ್ತಾ ಈ ಬಗ್ಗೆ ರಾಷ್ಟ್ರೀಯ ಪತ್ರಕೆಯೊಂದಕ್ಕೆ ಮಾತನಾಡಿ, ಪಿಡಬ್ಲ್ಯುಡಿ ಅವರು ಈ ಸೇತುವೆಯನ್ನು ನಿರ್ಮಾಣ ಮಾಡಿದ್ದಾರೆ. ಹೀಗಾಗಿ ನಾನು ಅವರಿಂದ ಈ ಕುರಿತು ಸೋಮವಾರ ವರದಿ ಸಂಗ್ರಹಿಸುತ್ತೇನೆ. ಬಳಿಕ ತನಿಖೆ ನಡೆಸಲು ಶಿಫಾರಸ್ಸು ಮಾಡುತ್ತೇನೆ ಅಂತ ಹೇಳಿದ್ದಾರೆ.
ಕಳಪೆ ಗುಣಮಟ್ಟದ ಕಾಮಗಾರಿಯೇ ಘಟನೆಗೆ ಕಾರಣವಾಗಿದ್ದು, ಹೀಗಾಗಿ ಈ ಬಗ್ಗೆ ಸಂಬಂಧಪಟ್ಟವರು ಪ್ರತಿಕ್ರಿಯಿಸಬೇಕು. ಇಲ್ಲವೆಂದಲ್ಲಿ ಈ ಕುರಿತು ಗ್ರಾಮಸ್ಥರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ದೂರು ದಾಖಲಿಸುತ್ತಾರೆ ಅಂತ ತಿಳಿಸಿದ ಸ್ಥಳೀಯ ಬಿಜೆಪಿ ಶಾಸಕ ಪ್ರಹ್ಲಾದ್ ಭಾರ್ತಿ, ಕಳಪೆ ಕಾಮಗಾರಿ ಹಾಗೂ ಮುಂದೆ ಸಮಸ್ಯೆ ಆಗುವ ಭಯದಲ್ಲಿ ಗ್ರಾಮಸ್ಥರಿದ್ದಾರೆ ಅಂತ ಹೇಳಿದ್ರು.
ಶನಿವಾರ ಸುರಿದ ಭಾರೀ ಮಳೆಯಿಂದಾಗಿ ನದಿ ಸೇತುವೆಯ ಮೇಲೆ ನೀರು ಹರಿದು ಹೋಗಿದೆ. ಈ ಹಿನ್ನೆಲೆಯಲ್ಲಿ ಸೇತುವೆ ಕುಸಿದಿದೆ. ನನ್ನ ಕ್ಷೇತ್ರದಲ್ಲಿ ಕೇವಲ ಒಂದು ಗ್ರಾಮದಲ್ಲಿ ಮಾತ್ರ ಮಳೆಯಿಂದ ಹಾನಿಯಾಗಿದ್ದು, ಹೀಗಾಗಿ ಹಾನಿಯಾದ ಸಂಬಂಧ ತನಿಖೆ ನಡೆಸಬೇಕು ಅಂತ ಭಾರ್ತಿ ಆಗ್ರಹಿಸಿದ್ರು.
ಮಳೆಯಿಂದಾಗಿ ಶಿಯೋಪುರ್ ಹಾಗೂ ಶಿವಪುರಿ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೊಂಡಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಚಾಲಕರು ಪರದಾಡುತ್ತಿದ್ದಾರೆ. 2 ಅಡಿಗಳಷ್ಟು ಗುಂಡಿಗಳು ರಸ್ತೆಯಲ್ಲಿ ನಿರ್ಮಾಣವಾಗಿದೆ. ಈ ರಸ್ತೆ ಕೂಡ ಇದೇ ವರ್ಷದ ಆರಂಭದಲ್ಲಿ ನಿರ್ಮಾಣವಾಗಿದ್ದು, ಇಷ್ಟು ಬೇಗ ಮಳೆಗೆ ಹಾಳಾಗಿರುವುದು ವಿಷಾದನೀಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv