– ಕೋರ್ಟ್ ತೀರ್ಪು ಬರುವವರೆಗೆ ಫಲಿತಾಂಶ ಘೋಷಣೆಗೆ ತಡೆ
ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ ಕೆ.ಸುಧಾಕರ್ ಮಧ್ಯೆ ಭಾರೀ ಪ್ರತಿಷ್ಠೆಗೆ ಜಿದ್ದಾಜಿದ್ದಿಗೆ ಕಾರಣವಾಗಿ, ಸಿನಿಮೀಯ ಶೈಲಿಯಲ್ಲಿ ನಡೆದ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಅಂತಿಮವಾಗಿ ಮುಕ್ತಯವಾಗಿದೆ. ನ್ಯಾಯಾಲಯದ ನಿದೇರ್ಶನದ ಮೇರೆಗೆ ಫಲಿತಾಂಶ ಕಾಯ್ದಿರಿಸಲಾಗಿದೆ. ಆದರೂ, ಅನಧಿಕೃತವಾಗಿ ಸಂಸದ ಸುಧಾಕರ್ ಬೆಂಬಲಿಗರು ಚುನಾವಣೆಯಲ್ಲಿ ಜಯಗಳಿಸಿದ್ದು, ವಿಜಯೋತ್ಸವ ಆಚರಣೆ ಮಾಡಿದರು.
Advertisement
ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ 16 ಮಂದಿ ಸದಸ್ಯರು, ಬಿಜೆಪಿ 09 ಮಂದಿ ಹಾಗೂ ಜೆಡಿಎಸ್‌ನ ಇಬ್ಬರು ಸೇರಿದಂತೆ 4 ಮಂದಿ ಪಕ್ಷೇತರರು ಹಾಗೂ ಎಂಎಲ್‌ಎ ಪ್ರದೀಪ್ ಈಶ್ವರ್, ಎಂಪಿ ಡಾ ಕೆ.ಸುಧಾಕರ್ ಹಾಗೂ ಇಬ್ಬರು ಎಂಎಲ್‌ಸಿಗಳಾದ ಸೀತಾರಾಂ ಹಾಗೂ ಅನಿಲ್ ಕುಮಾರ್ ಚುನಾವಣೆಯಲ್ಲಿ ಮತದಾನ ಮಾಡಿದರು. ಅನಧಿಕೃತ ಮಾಹಿತಿ ಮೇರೆಗೆ ಸುಧಾಕರ್ ಬೆಂಬಲಿತ ಗಜೇಂದ್ರ ಅಧ್ಯಕ್ಷರಾಗಿ ಹಾಗೂ ಗ್ಯಾಸ್ ನಾಗರಾಜು ಉಪಾಧ್ಯಕ್ಷರಾಗಿ ಜಯಗಳಿಸಿದ್ದಾರೆ ಎನ್ನಲಾಗಿದೆ.
Advertisement
ಎಂಎಲ್‌ಸಿಗಳಾದ ಅನಿಲ್ ಕುಮಾರ್ ಹಾಗೂ ಸೀತಾರಾಂ ಮತದಾನ ಮಾಡಲು ಅರ್ಹರಲ್ಲ ಅಂತಾ ಸುಧಾಕರ್ ಬೆಂಬಲಿಗರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ಕಾರಣ ಮತದಾನಕ್ಕೆ ಅವಕಾಶ ನೀಡಿ ಚುನಾವಣೆ ನಡೆಸಲು ಕೋರ್ಟ್ ಸೂಚನೆ ನೀಡಿದ್ದರೂ ಫಲಿತಾಂಶ ರಿಟ್ ಅರ್ಜಿಯ ಫಲಿತಾಂಶಕ್ಕೆ ಒಳಪಟ್ಟಿರುವುದಾಗಿ ಆದೇಶಿಸಿತ್ತು. ಹಾಗಾಗಿ ಚುನಾವಣೆ ನಡೆದರೂ ಅಧಿಕೃತವಾಗಿ ಚುನಾವಣಾಧಿಕಾರಿ ಫಲಿತಾಂಶ ಪ್ರಕಟ ಮಾಡಿಲ್ಲ.
Advertisement
ಚುನಾವಣೆಯ ನಂತರ ಮಾತನಾಡಿದ ಸಂಸದ ಸುಧಾಕರ್, ನಮ್ಮ ಸದಸ್ಯರನ್ನ ಕಾಂಗ್ರೆಸ್‌ನವರು ಹೈಜಾಕ್ ಮಾಡಲು ಬಹಳಷ್ಟು ಪ್ರಯತ್ನ ಮಾಡಿದರು. ಶಾಸಕ ಪ್ರದೀಪ್ ಈಶ್ವರ್ ಉಡಾಫೆ ಮಾತುಗಳು, ದ್ವೇಷದ ರಾಜಕಾರಣ ನನಗೆ ಹೂಮಾಲೆಯಾಗಿ ನನ್ನ ಕೊರಳಿಗೆ ಬೀಳುತ್ತಿದೆ. ಇವರ ಡ್ಯಾನ್ಸ್ ಹೀಗೆ ಮುಂದುವರೆಯಲಿ. ಇನ್ನೂ ಮೂರು ವರ್ಷ ಹೀಗೆ ಮಾಡಿ. ಆಮೇಲೆ ಈ ರಾಜ್ಯ ದೇಶದಲ್ಲಿ ಎಲ್ಲೂ ಅವಕಾಶ ಇರಲ್ಲ. ಪ್ಲೀಸ್ ನೋಟ್ ಮೈ ಪಾಯಿಂಟ್ ಎಂದು ಟಾಂಗ್ ನೀಡಿದರು. ಸಂಸದ ಸುಧಾಕರ್ ಹೇಳಿಕೆಗೆ ಕೆಂಡ ಕಾರಿದ ಶಾಸಕ ಪ್ರದೀಪ್ ಈಶ್ವರ್, ಮಿಸ್ಟರ್ ಎಂಪಿ ಸುಧಾಕರ್ ನೀವಲ್ಲ, ನಿಮ್ಮ ಅಪ್ಪನೂ ನನ್ನ ಟಚ್ ಮಾಡೋಕೆ ಆಗಲ್ಲ. ಸುಧಾಕರ್ ಕೋವಿಡ್ ಕಳ್ಳ, ನಂಬರ್ ಗೇಮ್ ನನ್ನ ಕಡೆ ಇರಲಿಲ್ಲ. ನನ್ನ ಮುಟ್ಟೋಕೆ ಆಗಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.