ಕೊಪ್ಪಳ: ಜಿಲ್ಲೆಯಾದ್ಯಂತ ಗಣೇಶ ಉತ್ಸವ ಸೇರಿ ಇತರ ಕಾರ್ಯಕ್ರಮಗಳಲ್ಲೂ ಡಿಜೆ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದು ಸಂಸದ ಸಂಗಣ್ಣ ಕರಡಿ ಆಕ್ರೋಶಕ್ಕೆ ಕಾರಣವಾಗಿದೆ.
ಗಣೇಶ ವಿಸರ್ಜನೆ ಅಂದರೆ ಹಬ್ಬ, ಆಡಂಬರ ಮತ್ತು ಡಿಜೆ ಸೌಂಡ್‍ನೊಂದಿಗೆ ಕುಣಿತ ಸಾಮಾನ್ಯ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಕಳೆದ 2 ವರ್ಷದಿಂದ ಡಿಜೆ ನಿಷೇಧಿಸಿದ್ದರಿಂದ ಇಂಥ ಆಡಂಬರಕ್ಕೆ ಬ್ರೇಕ್ ಬಿದ್ದಿದೆ. ಜಿಲ್ಲಾಧಿಕಾರಿಗಳ ಈ ನಡೆಗೆ ಬಿಜೆಪಿಯಿಂದ ಆಯ್ಕೆಯಾಗಿರೋ ಜನಪ್ರತಿನಿಧಿಗಳು ಕೋಪಗೊಂಡಿದ್ದಾರೆ. ಈ ಕಾರಣಕ್ಕೆ ಸಂಸದ ಸಂಗಣ್ಣ ಕರಡಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಪ್ರಗತಿ ಪರಿಶೀಲನೆ ಸಭೆಯಲ್ಲೇ ಡಿಸಿ ವಿರುದ್ಧ ಸಿಡಿಮಿಡಿಗೊಂಡರು.
ಕಳೆದ ಮೂರು ವರ್ಷದ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ಬನಾಯೆಂಗೇ ಮಂದಿರ ಎಂಬ ಹಾಡು ನಿಷೇಧಿಸಲಾಗಿತ್ತು. ಎರಡು ವರ್ಷದಿಂದ ಭಾರೀ ಧ್ವನಿಯ ಡಿಜೆ ಬಳಕೆಯನ್ನೇ ನಿಷೇಧಿಸಲಾಗಿದೆ. ಈ ಹಿಂದೆ ಗಂಗಾವತಿ ಶಾಸಕರಾಗಿದ್ದ ಇಕ್ಬಾಲ್ ಅನ್ಸಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಡಿಜೆ ನಿಷೇಧ ಮಾಡಿದ್ದರು. ಶಾಸಕರ ಈ ಕ್ರಮದ ಕುರಿತು ಚುನಾವಣೆಯಲ್ಲೂ ಚರ್ಚೆಯಾಗಿ ಬಿಜೆಪಿಯ ಕೆಲ ಮುಖಂಡರು, ಗಂಗಾವತಿಯಲ್ಲಿ ಗಣೇಶ ಚತುರ್ಥಿ ವೇಳೆ ಡಿಜೆ ಬಳಕೆ ಮಾಡಬೇಕು ಅಂದ್ರೆ ಬಿಜೆಪಿಗೆ ವೋಟ್ ಮಾಡಿ ಅಂತಾ ಪ್ರಚಾರ ಮಾಡಿದ್ದರು. ಆದರೆ ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ಸೋಲುಂಡಿದ್ದರೂ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿದೆ. ಅನ್ಸಾರಿ ಈ ಬಾರಿಯೂ ಒತ್ತಡ ಹಾಕಿ ಡಿಜೆ ಬ್ಯಾನ್ ಮಾಡಿರೋದು ಬಿಜೆಪಿಗರ ಸಿಟ್ಟಿಗೆ ಕಾರಣವಾಗಿದೆ.
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿಯೇ ಕೊಪ್ಪಳದಲ್ಲಿ ಡಿಜೆಗೆ ನಿಷೇಧ ಹೇರಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹಂಪಿ ಉತ್ಸವ, ಇಟಗಿ ಉತ್ಸವದಲ್ಲಿ ಡಿಜೆಯನ್ನು ಬಳಸುತ್ತಾರೆ. ಆಗ ಆಗದ ತೊಂದರೆ ಗಣೇಶ ಹಬ್ಬದಲ್ಲಿ ತೊಂದರೆಯಾಗುತ್ತಾ ಎಂಬುದು ಗಣೇಶ ಸ್ಥಾಪನಾ ಮಂಡಳಿ ಯುವಕರ ಪ್ರಶ್ನೆಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv