ಬೆಂಗಳೂರು: ಬಿಜೆಪಿ ನಾಯಕರು ಸುಳ್ಳು ಹೇಳುವದರಲ್ಲಿ ಎಕ್ಸಪರ್ಟ್. ಈಗಾಗಲೇ ಕಮಲ ನಾಯಕರ ಬಣ್ಣ ರಾಜ್ಯದ ಜನರ ಮುಂದೆ ಬಯಲಾಗಿದೆ ಎಂದು ಸಂಸದ ಡಿಕೆ ಸುರೇಶ್ ಬಿಜೆಪಿ ಮುಖಂಡರಿಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹಾರಗದ್ದೆ ಗ್ರಾಮದ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಡಿ.ಕೆ.ಸುರೇಶ್, ಬಿಜೆಪಿಯವರು ಸರ್ಕಾರ ಬೀಳಿಸಲು ಹತಾಶೆಯಿಂದ ಇಲ್ಲಸಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಬಿಜೆಪಿಯವರ ಕುತಂತ್ರದ ಬಗ್ಗೆ ಸಿಎಂ ಕುಮಾರಸ್ವಾಮಿಯವರು ಬಿಡುಗಡೆ ಮಾಡಿರು ಆಡಿಯೋ ಸುಳ್ಳು ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ತಮ್ಮ ಮೇಲಿನ ಆರೋಪ ಸುಳ್ಳು ಎನ್ನುವುದಾದರೆ ದೂರು ನೀಡಿ ಸಿಬಿಐ ಅಥವಾ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ತಾವು ತಪ್ಪಿತಸ್ಥರಲ್ಲ ಎಂದು ಸಾಬೀತು ಮಾಡಲಿ ಎಂದು ಕಿಡಿಕಾರಿದರು.
ಸುಳ್ಳಿನ ಮಾತುಗಳಿಂದ ಜನರನ್ನ ಮರಳು ಮಾಡುವ ಕಾಲ ಹೋಯಿತು. ಬಿಜೆಪಿ ಕೇಂದ್ರ ನಾಯಕರಿಗೆ ಏನಾದರೂ ಸ್ವಲ್ಪ ನೈತಿಕತೆ ಇದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಆಮಿಷ ಒಡ್ಡುತ್ತಿರುವವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಿ. ಎಂಎಲ್‍ಸಿ ಮಾಡಲು ಸಿಎಂ ಕುಮಾರಸ್ವಾಮಿ 25 ಕೋಟಿ ಕೇಳುತಿದ್ದಾರೆ ಎಂದು ಲಿಂಬಾವಳಿಯವರು ಬಾಯಿ ಚಪಲಕ್ಕೆ ಇಲ್ಲದಿರುವುದನ್ನು ಸೃಷ್ಟಿ ಮಾಡುತಿದ್ದಾರೆ. ಅದೆಲ್ಲವೂ ಶುದ್ಧ ಸುಳ್ಳು ಲಿಂಬಾವಳಿಯವರು ಆಧಾರ ರಹಿತ ಆರೋಪ ಮಾಡುತಿದ್ದಾರೆ ಎಂದು ಗುಡುಗಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv