ಮಂಗಳೂರು/ನವದೆಹಲಿ: ಸಂಸತ್ತಿನ ಕಚೇರಿಯಲ್ಲಿ ಗುರುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿಯಾಗಿದ್ದಾರೆ.
ಬಿ.ಸಿ. ರೋಡ್ – ಸುರತ್ಕಲ್ ನಡುವಿನ ಬಂದರು ಸಂಪರ್ಕಿಸುವ ಹೆದ್ದಾರಿ ಹದಗೆಟ್ಟಿರುವುದು ಹಾಗೂ ಅದರ ಶಾಶ್ವತ ನಿರ್ವಹಣೆಗೆ ಎದುರಾಗಿರುವ ಅಡಚಣೆ, ಸಮಸ್ಯೆ – ಸವಾಲುಗಳ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆದಿದ್ದಾರೆ.
ಈ ಪ್ರಮುಖ ರಸ್ತೆಯು ಪ್ರಸ್ತುತ NHLML ವ್ಯಾಪ್ತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರ ನಿರ್ವಹಣೆಗೆ ಸೂಕ್ತವಾದ ಏಜೆನ್ಸಿ ಇಲ್ಲದ ಕಾರಣ ಹಾಗೂ ನಿಧಿಯ ಕೊರತೆಯ ಕಾರಣ ಕಾಲ ಕಾಲಕ್ಕೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮನವರಿಕೆ ಮಾಡಿದ್ದಾರೆ.
ಅದರಲ್ಲೂ ಮಳೆಗಾಲದಲ್ಲಿ ಈ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಈ ಹಿನ್ನೆಲೆಯಲ್ಲಿ ಬಿ.ಸಿ. ರೋಡ್ – ಸುರತ್ಕಲ್ ಹೆದ್ದಾರಿಯನ್ನು NHAI ವ್ಯಾಪ್ತಿಗೆ ತಂದು ಅದರ ಸಮರ್ಪಕ ನಿರ್ವಹಣೆ, ವಾಹನಗಳ ಸುಗಮ ಸಂಚಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೆ ಖುದ್ದಾಗಿ ಗಮನಹರಿಸಿ ಈ ಗಂಭೀರ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶಿಸುವಂತೆ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಸಂಸದರು ಕೂಡಾ ನಿರಂತರವಾಗಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಅಗತ್ಯ ಕ್ರಮ ಜರುಗಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಭೇಟಿ ವೇಳೆ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ.
ಮಂಗಳೂರು ನಗರ ಭಾಗದ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು NH-66 ಮತ್ತು NH-75 ಅನ್ನು ಸಂಪರ್ಕಿಸುವ ರಿಂಗ್ ರೋಡ್ ನಿರ್ಮಿಸುವಂತೆ ಇದೇ ಸಂದರ್ಭದಲ್ಲಿ ಸಂಸದರು ಮನವಿ ಮಾಡಿದ್ದಾರೆ.